ನಗರದ ಆದಿ ಮ್ಯಾನರ್ ಹೊಟೇಲ್ ಮೇಲೆ ಶ್ರೀರಾಮಸೇನೆ ಕಾರ್ಯಕರ್ತರು ದಾಳಿ ನಡೆಸಿಲ್ಲ, ಕುರ್ಚಿ, ಗಾಜು ಒಡೆದಿಲ್ಲ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಅಕ್ರಮ ಚಟುವಟಿಕೆಗಳು ಬಯಲಾಗುತ್ತವೆ ಎಂಬ ಭೀತಿಯಿಂದ ಶ್ರೀರಾಮಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆಂದು ಪೊಲೀಸರು ಸುಳ್ಳು ಮೊಕದ್ದಮೆ ಹೂಡಿದ್ದಾರೆ. ಪೊಲೀಸರೇ ಹೆಣೆದಿರುವ ಕಟ್ಟು ಕಥೆ ಇದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಆ.14 ರಂದು ಮಧ್ಯರಾತ್ರಿ 12 ಕ್ಕೆ ಚಾಮುಂಡಿಪುರಂ ವೃತ್ತದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದ ಕಾರ್ಯಕರ್ತರು ಕ್ಯಾತಮಾರನಹಳ್ಳಿಯಿಂದ ಬಂದಿದ್ದ ಕೆಲವರನ್ನು ಬಿಡಲು ತೆರಳುತ್ತಿದ್ದಾಗ ಸಂಗಂ ಚಿತ್ರಮಂದಿರ ಎದುರಿನ ಹೋಟೆಲ್‌ನಲ್ಲಿ ಸಂಗೀತ, ಕುಣಿತ, ಕಿರುಚಾಟ ಕೇಳಿಬಂತು. ಈ ವಿಷಯವನ್ನು ಪೊಲೀಸ್ ಕಂಟ್ರೋಲ್ ರೂಂಗೆ ಮುಟ್ಟಿಸಲಾಗಿದ್ದು, ಇದು ದಾಖಲಾಗಿದೆ. ಜತೆಗೆ ಕುಡಿತ, ಕುಣಿತವನ್ನು ಫೋಟೋ, ವಿಡಿಯೋ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಆ ವೇಳೆ ಅಲ್ಲಿ ಲಷ್ಕರ್ ಠಾಣೆಯ ಪಿಎಸ್ಐ, ಒಬ್ಬ ಕಾನ್ಸ್‌ಟೇಬಲ್ ವಿದೇಶಿ ಮಹಿಳೆಯೊಂದಿಗೆ ಕುಡಿಯುತ್ತಾ ಕುಳಿತ್ತಿದ್ದರು. ಹೊರಗಡೆ ಕೆಂಪು ದೀಪವಿರುವ ಕಾರು (ಕೆಎ01-ಎಫ್ಎ 4545) ನಿಂತಿತ್ತು. ಜತೆಗೆ ನಾಲ್ಕಾರು ಮಂದಿ ಪೊಲೀಸ್ ಅಕಾರಿಗಳೂ ಇದ್ದರು. ನಮ್ಮ ಕಾರ್ಯಕರ್ತರು ಫೋಟೋ ತೆಗೆದಿರುವುದನ್ನು ಕಂಡ ಪೊಲೀಸರು ಭಯಬಿದ್ದು ಕಾರ್ಯಕರ್ತರನ್ನು ಬಂಧಿಸಿ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ದೂರಿದರು.
ನಿಯಮಾನುಸಾರ ಹೋಟೆಲ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರಬೇಕು. ಅದರಲ್ಲಿ ಗಲಾಟೆ ದಾಖಲಾಗಿದ್ದರೆ ತೋರಲಿ. ಸಿಸಿ ಕ್ಯಾಮೆರಾ ಇಲ್ಲವಾದರೆ ಹೋಟೆಲ್ ವಿರುದ್ಧ ಕಾನೂನು ಕ್ರಮವಹಿಸಬೇಕು. ಈ ಪೊಲೀಸರು ಅಲ್ಲಿರಲು ಕಾರಣವೇನು, ಆ ಕಾರು ಯಾರದು ಎನ್ನುವುದು ತನಿಖೆಯಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಗೃಹ ಸಚಿವರಿಗೆ ದಾಖಲೆ ಸಮೇತ ದೂರು ಸಲ್ಲಿಸಲಾಗುವುದು ಎಂದರು.