ರಾಜ್ಯದ ಕಡೂರು ಮತ್ತು ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆ ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಅಗ್ನಿ ಪರೀಕ್ಷೆಯಾದರೆ, ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಶಶಿಲ್ ನಮೋಲ್ ಅವರನ್ನು ಕಣಕ್ಕಿಳಿಸಿರುವುದು ಶಾಸಕ ದಿ.ಚಂದ್ರಶೇಖರ ಪಾಟೀಲ್ ರೇವೂರ ಪುತ್ರನ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ.
ಸೆಪ್ಟೆಂಬರ್ 13ರಂದು ಗುಲ್ಬರ್ಗ ದಕ್ಷಿಣ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಗುಲ್ಬರ್ಗ ದಕ್ಷಿಣದಲ್ಲಿ ಚಂದ್ರಶೇಖರ ಪಾಟೀಲ್ ರೇವೂರ ಮತ್ತು ಕಡೂರು ಕ್ಷೇತ್ರದಲ್ಲಿ ಕೃಷ್ಣಮೂರ್ತಿ ಅವರ ನಿಧನದಿಂದಾಗಿ ಉಪ ಚುನಾವಣೆ ನಡೆಯುವಂತಾಗಿದೆ.
ಬಿಜೆಪಿ ಕಡೂರು ಕ್ಷೇತ್ರದಿಂದ ಡಾ.ವಿಶ್ವನಾಥ್, ಗುಲ್ಬರ್ಗಾ ದಕ್ಷಿಣದಿಂದ ಶಶಿಲ್ ನಮೋಶಿ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಶಾಸಕ ದಿ.ಕೃಷ್ಣಮೂರ್ತಿ ಅವರ ಪತ್ನಿ ಸುಜಾತ ಕೃಷ್ಣಮೂರ್ತಿ ಅವರಿಗೆ ಹಾಗೂ ಗುಲ್ಬರ್ಗ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಡಾ.ಅಜಯ್ ಸಿಂಗ್ ಅವರಿಗೆ ಟಿಕೆಟ್ ನೀಡಿದೆ. ಜೆಡಿಎಸ್‌ನಿಂದ ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಸಿದೆ. ಗುಲ್ಬರ್ಗಾದಲ್ಲಿ ರೇವೂರ ಪುತ್ರನನ್ನು ಸೆಳೆಯಲು ಜೆಡಿಎಸ್ ತಂತ್ರ ರೂಪಿಸಿದೆ.
ನಮೋಶಿಗೆ ಟಿಕೆಟ್ ಬಿಜೆಪಿಯಲ್ಲಿ ಬಂಡಾಯ?: ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಚಂದ್ರಶೇಖರ ಪಾಟೀಲ್ ರೇವೂರ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಪುತ್ರ ದತ್ತಾತ್ರೇಯ ಪಾಟೀಲ್ ರೇವೂಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು. ಆದರೆ ಕೊನೆಗಳಿಗೆಯಲ್ಲಿ ಬಿಜೆಪಿ ಶಶಿಲ್ ನಮೋಶಿಯನ್ನು ಅಖಾಡಕ್ಕೆ ಇಳಿಸಿರುವುದು ರೇವೂರ ಅಭಿಮಾನಿಗಳನ್ನು ಕೆರಳಿಸಿದೆ.
ಆ ಕಾರಣಕ್ಕಾಗಿ ಇಂದು ರೇವೂರ ಅಭಿಮಾನಿಗಳು ನಮೋಶಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ನಿರ್ಧಾರದ ವಿರುದ್ದ ಕಿಡಿಕಾರಿದೆ. ರೇವೂರ ಅವರಿಗೆ ಟಿಕೆಟ್ ಕೊಡುವುದಾಗಿ ಹೇಳಿ ಇದೀಗ ಮುಖ್ಯಮಂತ್ರಿಗಳು ವಂಚಿಸಿದ್ದಾರೆ. ಅದಕ್ಕೆ ತಕ್ಕ ಪಾಠ ಕಲಿಸುವುದಾಗಿ ರೇವೂರ ಕುಟುಂಬ ತಿರುಗೇಟು ನೀಡಿದೆ.
ದತ್ತಾತ್ರೇಯ ಪಾಟೀಲ್‌ಗೆ ಜೆಡಿಎಸ್ ಗಾಳ!: ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಸೆಳೆಯಲು ಜೆಡಿಎಸ್ ತಂತ್ರ ರೂಪಿಸಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ಗುಲ್ಬರ್ಗಾಕ್ಕೆ ತೆರಳಿ ರೇವೂರ ಕುಟುಂಬದ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಒಂದು ವೇಳೆ ಮಾತುಕತೆ ಫಲಪ್ರದವಾದರೆ ಗುಲ್ಬರ್ಗಾ ದಕ್ಷಿಣಕ್ಕೆ ರೇವೂರ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ.
ಜೆಡಿಎಸ್ ವಿರುದ್ಧ ಪ್ರಕರಣ ದಾಖಲು: ಕಡೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತಾ ಸೋಮವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಅವರ ಜತೆ 16 ಮಂದಿ ಇದ್ದರು. ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಭಾರೀ ಜನಬೆಂಬಲದೊಂದಿಗೆ ಆಗಮಿಸಿದ ದತ್ತಾ ಅವರು ನಾಮಪತ್ರ ಸಲ್ಲಿಸಿದ್ದರು.