'ನನ್ನ ರಾಜೀನಾಮೆಯಿಂದ ನಿಜವಾಗಿಯೂ ರಾಜ್ಯದ ಎಲ್ಲ ಸಮಸ್ಯೆಗಳು ಬಗೆಹರಿಯುವುದಾದಲ್ಲಿ ಖಂಡಿತಾ ನಾಳೆಯೇ ನಾನು ರಾಜೀನಾಮೆ ಕೊಡಲು ಸಿದ್ಧ.'
ಹೀಗೆ ಹೇಳಿದ್ದು ಇನ್ಯಾರೋ ಅಲ್ಲ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ. ಪ್ರತಿಪಕ್ಷಗಳು ದಿನವೂ ಮುಖ್ಯಮಂತ್ರಿಗಳನ್ನು ರಾಜೀನಾಮೆಗೆ ಒತ್ತಾಯಿಸುವ ಪ್ರಕ್ರಿಯೆ ಕುರಿತು ಯಡಿಯೂರಪ್ಪ ಹೀಗೆ ಸವಾಲು ಹಾಕಿದರು. ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ 54 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿೆ ಶಂಕು ಸ್ಥಾಪನೆ ಮಾಡಿ ಅವರು ಮಾತನಾಡುತ್ತಿದ್ದರು.
ರಾಜೀನಾಮೆಯೊಂದೇ ಸಮಸ್ಯೆಗಳಿಗೆ ಪರಿಹಾರವಲ್ಲ. ವಿರೋಧಪಕ್ಷಗಳು ನಿಜವಾಗಿಯೂ ಆಡಳಿತ ಪಕ್ಷ ತಪ್ಪು ಹಾದಿ ಹಿಡಿಯುತ್ತಿದ್ದರೆ, ಗಮನ ಸೆಳೆದು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ನಿಜ. ಆದರೆ, ಇಲ್ಲಿ ಅದು ನಡೆಯುತ್ತಿಲ್ಲ. ಆರೋಗ್ಯಕರ ಟೀಕೆಗಳನ್ನು ನಾನು ಸಹಿಸಿಕೊಂಡೇನು. ಆದರೆ, ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ರಾಜೀನಾಮೆ ಕೇಳುವ ಕೆಲಸವವನ್ನಷ್ಟೇ ಮಾಡುತ್ತಿವೆ ಎಂದು ಯಡಿಯೂರಪ್ಪ ಕಿಡಿ ಕಾರಿದರು.
ನಾವು ಅಧಿಕಾರಕ್ಕೆ ಬಂದಾಗಿನಿಂದಲೇ ಗಣಿಗಾರಿಕೆಗೆ ಹೊಸ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದ್ದೇವೆ. ಆದರೆ ವಿರೋಧ ಪಕ್ಷಗಳು ಅರ್ಥವಿಲ್ಲದೆ ಗಣಿಗಾರಿಕೆ ಬಗ್ಗೆ ವೃಥಾ ಟೀಕೆ ಮಾಡುತ್ತಿವೆ. ಪಾದಯಾತ್ರೆಯಲ್ಲಿ ಭಾಷಣಗಳ ಮೇಲೆ ಭಾಷಣಗಳನ್ನು ಮಾಡಿದ ಕಾಂಗ್ರೆಸ್ ಮುಖಂಡರು ಸಂಸತ್‌ನಲ್ಲೇಕೆ ತುಟಿಪಿಟಿಕ್ಕೆನ್ನದೆ ಕೂತಿದ್ದರು ಎಂದು ಅವರು ಕಾಂಗ್ರೆಸ್ ಮುಖಂಡರನ್ನು ವ್ಯಂಗ್ಯವಾಡಿದರು.