ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಸತತ ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿರುವ ಶಶಿಲ್ ನಮೋಶಿ ಅವರು ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ನಮೋಶಿ 150ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಆಸ್ತಿಗೆ ಒಡೆಯರಾಗಿರುವುದಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ವೇಳೆ ಲಗತ್ತಿಸಿದ ಆಸ್ತಿ ವಿವರ ದಾಖಲೆಯಲ್ಲಿ ನಮೂದಿಸಿದ್ದಾರೆ.
ಆದರೆ ನಮೋಶಿ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಲ್ಲವಂತೆ. ಅವರಲ್ಲಿ ಇರುವ ನಗದು ಮೊತ್ತ 24,300 ರೂಪಾಯಿ ಮಾತ್ರ. ಎಚ್ಎಲ್ಎಲ್‌ನ 25 ಶೇರುಗಳು, ಎನ್ಎಸ್‌ಸಿಯಲ್ಲಿ 48,521 ರೂ., ಎಲ್ಐಸಿಯಲ್ಲಿ 5 ಲಕ್ಷ ರೂಪಾಯಿ, ಇನ್ನೋವಾ ಕಾರು, ಫಿಯಟ್ ಕಾರು, ಚಿನ್ನಾಭರಣ ಇಲ್ಲ, ಕುಸನೂರ ಹಳ್ಳಿಯಲ್ಲಿ ಹತ್ತು ಎಕರೆ ಜಮೀನು(ಬೆಲೆ 15 ಲಕ್ಷ ರೂಪಾಯಿ), ಖೂಬಾ ಪ್ಲಾಟ್‌ನಲ್ಲಿ 55 ಲಕ್ಷ ರೂಪಾಯಿ ನಿವೇಶನ, ಬೆಂಗಳೂರು ಎಚ್ಎಸ್ಆರ್ ಬಡಾವಣೆಯಲ್ಲಿ 35 ಲಕ್ಷ ರೂಪಾಯಿ ಬೆಲೆಯ ನಿವೇಶನ, ಸೂಪರ್ ಮಾರ್ಕೆಟ್ ಮಳಿಗೆ 65 ಲಕ್ಷ ರೂಪಾಯಿ ಬೆಲೆ, ಆನಂದ ನಗರದಲ್ಲಿ ಮನೆ 40 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 150 ಕೋಟಿ ರೂಪಾಯಿಗೂ ಹೆಚ್ಚಿನ ಆಸ್ತಿ-ಪಾಸ್ತಿ ಹೊಂದಿದ್ದಾರೆ.
ಪತ್ನಿ ಪೂರ್ಣಿಮಾ ಅವರಲ್ಲಿ 40 ಗ್ರಾಂ ಚಿನ್ನಾಭರಣ, 80 ಗ್ರಾಂ ಬೆಳ್ಳಿ, ಕಪನೂರ್ ಹಳ್ಳಿಯಲ್ಲಿ 2 ನಿವೇಶನಗಳಲ್ಲಿ ಶೇ.15ರಷ್ಟು ಪಾಲು, ಶೇ.15ರಷ್ಟು ಪಾಲು ಗೋವರ್ಧನ್ ಕನ್ಸ್‌ಟ್ರಕ್ಷನ್ ಕಂಪನಿಯಲ್ಲಿದೆ. ಪುತ್ರಿ ದೀಪ್ತಿ ಹೆಸರಿನಲ್ಲಿ ಟಿವಿಎಸ್ ಬೈಕ್, ತಾಯಿ ಭೂದೇವಿ ಮತ್ತು ಪುತ್ರಿ ದಿವ್ಯಾ ಹೆಸರಿನಲ್ಲಿ ಯಾವುದೇ ಆಸ್ತಿ-ಪಾಸ್ತಿ ಇಲ್ಲ ಎಂದು ನಮೋಶಿ ನಾಮಪತ್ರ ಜೊತೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಮಾಹಿತಿ ನೀಡಿದ್ದಾರೆ.