ರೈತರ ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಸಮಯವಿಲ್ಲ: ಧರಂಸಿಂಗ್
ಬೀದರ್, ಮಂಗಳವಾರ, 24 ಆಗಸ್ಟ್ 2010( 15:16 IST )
ಸಾಧನಾ ಸಮಾವೇಶಗಳನ್ನು ನಡೆಸುವಲ್ಲೇ ನಿರತವಾಗಿರುವ ರಾಜ್ಯ ಸರಕಾರಕ್ಕೆ ರೈತರ ಸಮಸ್ಯೆಗೆ ಸ್ಪಂದಿಸಲು ಪುರಸೊತ್ತು ಇಲ್ಲದಂತಾಗಿದೆ ಎಂದು ಸಂಸದ ಧರಂಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತಿವೃಷ್ಟಿಯಿಂದ ಹಾನಿ ಅನುಭವಿಸಿದ ತಾಲೂಕಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಾವೇಶಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲು ಸರಕಾರದ ಬಳಿ ಹಣವಿದೆ. ಆದರೆ ಕಷ್ಟದಲ್ಲಿರುವ ರೈತರ ಕಣ್ಣೊರೆಸಲು ಖಜಾನೆ ಖಾಲಿಯಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುವವರೇ ಗತಿ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಎದುರಾಗಿವೆ. ಆದರೆ ಇವರ ಗೋಳು ಕೇಳುವವರೇ ಯಾರೂ ಇಲ್ಲದಂತಾಗಿದೆ. ರೈತರ ಹಿತಕ್ಕೆ ತಾವು ಬದ್ಧ ಎನ್ನುತ್ತಿರುವ ಮುಖ್ಯಮಂತ್ರಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆಪಾದಿಸಿದರು.
ಹಲವಾರು ರೈತರಿಗೆ ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಿಂದ ಆದ ಬೆಳೆ ಹಾನಿ ಸಮೀಕ್ಷೆ ನಡೆದಿದೆ. ಸರಕಾರದ ಮುಂದೆ ವರದಿಯೂ ಇದೆ. ಆದರೆ ಇದುವರೆಗೆ ಯಾರಿಗೂ ನಯಾಪೈಸೆ ಹಣ ಕೊಟ್ಟಿಲ್ಲ. ಬೆಳೆ ವಿಮೆ ಪರಿಹಾರ ಒದಗಿಸಿ ಎಂದು ರೈತರು ಪದೇ ಪದೆ ಆಗ್ರಹಿಸುತ್ತಿದ್ದರೂ ಸರಕಾರ ಮತ್ತು ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು.
ಅಲಿಯಂಬರ್ ಸೇತುವೆ ಎತ್ತರ ಹೆಚ್ಚಿಸುವ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆ ಮಂಡಿಸಲಾಗುತ್ತಿದೆ. ಸ್ವಲ್ಪ ಮಳೆ ಬಿದ್ದರೂ ಇಲ್ಲಿ ಹಾಗೂ ಇದರ ಅಕ್ಕ-ಪಕ್ಕದ ಮೂರು ಹಳ್ಳಕ್ಕೆ ಪ್ರವಾಹ ಬಂದು ಅಪಾರ ಬೆಳೆ ನಾಶವಾಗುತ್ತಿದೆ. ಭಾನುವಾರ ಬಿದ್ದ ಮಳೆಗೆ ನೂರಾರು ಎಕರೆ ಭೂಮಿಯಲ್ಲಿನ ಫಸಲು ಕೊಚ್ಚಿ ಹೋಗಿದೆ. ಯುವಕನೊಬ್ಬ ಸಹ ಬಲಿಯಾಗಿದ್ದಾನೆ. ಸರಕಾರ ಇದನ್ನು ಗಂಭೀರ ಪರಿಗಣಿಸಬೇಕು. ಸೇತುವೆ ಎತ್ತರ ಹೆಚ್ಚಳ ಮಾಡುವುದು ಸೇರಿದಂತೆ ಶಾಶ್ವತ ಪರಿಹಾರ ರೂಪಿಸಬೇಕೆಂದು ಆಗ್ರಹಿಸಿದರು.