ಭಿಕ್ಷುಕರ ಪುನರ್ವಸತಿಗಾಗಿ ಸರಕಾರ 40 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಮಾಜ ಕಲ್ಯಾಣ ನೂತನ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದ 14 ಪುನರ್ವಸತಿ ಕೇಂದ್ರದಲ್ಲಿರುವ ಭಿಕ್ಷುಕರ ಕಲ್ಯಾಣ ಅಧಿಕಾರಿಗಳು, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಜಾತಿ-ಜನಾಂಗದವರ ಇಲಾಖೆಗಳ ಅಧಿಕಾರಿಗಳ ಜತೆ ಮೊದಲ ಸುತ್ತಿನ ಸಭೆ ನಡೆಸಿ ಭಿಕ್ಷುಕರಿಗೆ ಅನ್ಯಾಯವಾಗದಂತೆ ನಿಗಾ ವಹಿಸಬೇಕೆಂದು ತಾಕೀತು ಮಾಡಲಾಗಿದೆ ಎಂದರು.
ಭಿಕ್ಷುಕರಿಗಾಗಿ ನಾಲ್ಕು ಜತೆ ಬಟ್ಟೆ, ಸ್ನಾನಕ್ಕಾಗಿ ಬಿಸಿ ನೀರು, ಸಾಬೂನು, ಎಣ್ಣೆ, ಚಪ್ಪಲಿ ವ್ಯವಸ್ಥೆ ಮಾಡಲು ಹಾಗೂ ಯಾರಾದರೂ ಕೆಲಸ ಮಾಡುವವರು ಇದ್ದರೆ ಅವರಿಗೆ ನಿತ್ಯ ಸಂಬಳ ನೀಡಬೇಕು ಎಂಬ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಸಚಿವರಾದ ಬಳಿಕ ಮೊಟ್ಟ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸನ್ಮಾನಿಸಿದರು.