ಸಂತ್ರಸ್ತರಿಗೆ ಡಿಸೆಂಬರ್ ಅಂತ್ಯಕ್ಕೆ ಆಸರೆ ಮನೆ: ಕರುಣಾಕರ ರೆಡ್ಡಿ
ಬೆಳಗಾವಿ, ಮಂಗಳವಾರ, 24 ಆಗಸ್ಟ್ 2010( 15:22 IST )
ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯ ಸಂತ್ರಸ್ತರಿಗೆ 'ಆಸರೆ' ಮನೆಗಳನ್ನು ಬಿಟ್ಟುಕೊಡಲಾಗುವುದು ಎಂದು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಸರೆ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಎನ್. ಶೆಟ್ಟಿ ಕಂಪನಿ ಹೊರತುಪಡಿಸಿ ಇನ್ನುಳಿದ ಸಂಸ್ಥೆಗಳಿಂದ ನಿರ್ಮಿತವಾದ ಮನೆಗಳು ಡಿಸೆಂಬರ್ ತಿಂಗಳಲ್ಲಿ ಸಿದ್ಧಗೊಳ್ಳಲಿದೆ ಎಂದು ತಿಳಿಸಿದರು.
ಸಂತ್ರಸ್ತರಿಗೆ ಗುಣಮಟ್ಟದ ಮನೆ ಕಟ್ಟಿಕೊಡಬೇಕು, ಕಾಮಗಾರಿಯಲ್ಲಿ ಯಾವುದೇ ಲೋಪದೋಷ ಕಂಡು ಬಾರದಂತೆ ಎಚ್ಚರಿಕೆ ವಹಿಸಬೇಕು. ಆಧುನಿಕ ವ್ಯವಸ್ಥೆಗೆ ತಕ್ಕಂತೆ ಮನೆಯಲ್ಲಿ ವೈರಿಂಗ್ ಸೌಲಭ್ಯ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಳಪೆ ಕಾಮಗಾರಿ ಕಂಡುಬಂದರೆ ಜಿಲ್ಲಾಧಿಕಾರಿ ಗಮನಕ್ಕೆ ತರುವಂತೆಯೂ ಅವರು ಸಲಹೆ ನೀಡಿದರು.
ಭೂಸೇನಾ ನಿಗಮದ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿದ ಸಚಿವರು, ನಿಗಮ ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲೂ ಅಂಥ ಚುರುಕುತನದಿಂದ ಕೆಲಸ ಮಾಡುವಂತೆ ಸೂಚಿಸಿದರು.
ರಾಮದುರ್ಗ, ಚಿಕ್ಕೋಡಿ, ಅಥಣಿ, ಬೈಲಹೊಂಗಲ ಮುಂತಾದ ತಾಲೂಕುಗಳಲ್ಲಿ ಆಸರೆ ಯೋಜನೆಯಡಿ ಆದಷ್ಟು ಬೇಗ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಮೂಲಕ ತೊಂದರೆಗೊಳಗಾದ ಜನತೆಯ ನೆರವಿಗೆ ಧಾವಿಸುವಂತೆ ತಿಳಿಸಿದರು.