ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ ನಡೆಸಿದ್ದರಿಂದ ಕೇಂದ್ರ ಸರಕಾರ ಕ್ರಮಕ್ಕೆ ಮುಂದಾಗಿದ್ದು, ಬಳ್ಳಾರಿ ಗಣಿ ಹಗರಣದ ತನಿಖೆಗಾಗಿ ಆಯೋಗ ರಚಿಸಿರುವುದು ಪ್ರಾಥಮಿಕ ಗೆಲುವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.
ತನಿಖಾ ಆಯೋಗದ ವರದಿ ಬರಲಿ. ಮತ್ತೆ ಏನಾಗುತ್ತದೆ ನೋಡೋಣ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸರಕಾರವನ್ನು ಜನರೇ ಕಿತ್ತೊಗೆಯುತ್ತಾರೆ. ಅಲ್ಲಿಯ ತನಕ ನಾವು ವಿರಮಿಸುವುದಿಲ್ಲ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ರಾಜ್ಯದ ಬಿಜೆಪಿ ಸರಕಾರ ಮಾಡಿದ ಸಾಧನೆಗಳು ಜನರಿಗೆ ತಲುಪುತ್ತಿಲ್ಲ. ಅದಕ್ಕಾಗಿ ಅಲ್ಲಲ್ಲಿ ಸಮಾವೇಶ, ಜಾಹೀರಾತು, ಪ್ರಚಾರ ಮಾಡುವ ಸನ್ನಿವೇಶ ಬಂದೊದಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ಸಾಕಷ್ಟು ಪ್ರಚಾರ ಮಾಡಿದರೂ ಸಾಧನೆ ಕಾಣುತ್ತಿಲ್ಲ ಎಂದು ಅವರು ಟೀಕಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆಗೆ ಯಾವುದೇ ಗೊಂದಲ ಇಲ್ಲ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತೀರ್ಮಾನವೇ ಅಂತಿಮ. ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಲು ಮಂಗಳೂರಿನಲ್ಲಿ ಎಸ್ಎಸ್‌ಯುಐ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನು ಮುಂದುವರಿಸಲಾಗುವುದು ಎಂದರು.