ಗೋವಿನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಹೇಳಿಕೆ ನೀಡಿದ್ದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೃಷ್ಣಾದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಯಡಿಯೂರಪ್ಪ, ರೈತರ ಮತ್ತು ನಾಡಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾನು ಗೋಹತ್ಯೆ ನಿಷೇಧವನ್ನು ಮಾಡಿದ್ದೇನೆಯೇ ಹೊರತು ಇದರಲ್ಲಿ ಬೇರೆ ಉದ್ದೇಶಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಯಾವುದೇ ರಾಜಕೀಯ ಲಾಭದ ಗುರಿಯನ್ನು ಇಟ್ಟುಕೊಂಡು ಗೋಹತ್ಯೆ ನಿಷೇಧ ಮಸೂದೆ ಮಂಡಿಸಲಿಲ್ಲ. ಆದರೆ, ರಾಜ್ಯಪಾಲರು ಇದನ್ನು ರಾಜಕೀಯ ಎಂದು ಬಣ್ಣಿಸಿದ್ದು ನನಗೆ ಅಪಾರ ನೋವಾಗಿದೆ. ಇದರ ಬೇಕು ಬೇಡಗಳನ್ನು ನಿರ್ಧರಿಸುವ ವಿವೇಚನೆಯನ್ನು ಜನರಿಗೆ ಬಿಡುತ್ತೇನೆ ಎಂದರು.
ನನ್ನ ಮನಸ್ಸಿಗೆ ನೋವಾಗಿರುವುದು ನಿಜವಾದರೂ, ಅವರನ್ನು ನಾನು ಟೀಕೆ ಮಾಡಲಾರೆ. ಈ ಬಗ್ಗೆ ವಿಶ್ಲೇಷಣೆಯನ್ನೂ ಮಾಡೋದಿಲ್ಲ. ಈ ಕುರಿತು ಬೇರೇನೂ ಹೆಚ್ಚಿಗೆ ಮಾತನಾಡೋದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ರಾಷ್ಟ್ರಪತಿಗಳ ಅಂಕಿತ ಅನುಮಾನ?: ಇದೇ ವೇಳೆ ಇನ್ನೊಂದೆಡೆ, ಗೋಹತ್ಯೆ ನಿಷೇಧ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಸಿಗುವ ಬಗ್ಗೆ ಅನುಮಾನವಿದೆ ಎಂದು ಗೃಹಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು, ರಾಜ್ಯಪಾಲರ ಕ್ರಮ ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ಸಮಾವೇಶಗಳ ಮೂಲಕ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಆಚಾರ್ಯ ಹೇಳಿದರು.
'ಗೋಹತ್ಯೆ ನಿಷೇಧ ಮಸೂದೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಬೇಕಾದರೆ ನೀವೇ ರಾಷ್ಟ್ರಪತಿಗೆ ಕಳುಹಿಸಿಕೊಡಿ' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕಡತವನ್ನು ಹಿಂತಿರುಗಿಸಿದ್ದರು.