ರೆಡ್ಡಿ ಸಹೋದರರು ದೇವರಲ್ಲ, ನಾನು ಅವರಿಂದ ಯಾವುದೇ ಪ್ರಯೋಜನ ಪಡೆದುಕೊಂಡಿಲ್ಲ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮಗೆ ಕ್ಷೇತ್ರದ ಜನತೆ, ತಂದೆ-ತಾಯಿ ದೇವರೆ ಹೊರತು ಗಣಿ ಬ್ರದರ್ಸ್ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಈವರೆಗೂ ನಾನು ಬಳ್ಳಾರಿ ಸಚಿವರಿಂದ ಯಾವುದೇ ಲಾಭ ಮಾಡಿಕೊಂಡಿಲ್ಲ. ಅವರಿಂದ ಯಾವುದೇ ನೆರವು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಗಣಿ ಸಂಪತ್ತಿನ ಲೂಟಿ ನಿಲ್ಲಬೇಕೆಂದು ಹೇಳಿದ್ದೇನೆ. ಅಲ್ಲದೇ ಪಕ್ಷದ ಲಕ್ಷ್ಮಣರೇಖೆಯನ್ನು ಯಾರೂ ಮೀರಬಾರದು ಎಂದು ಹೇಳಿರುವುದಾಗಿ ತಿಳಿಸಿದರು.
ಗಣಿಗಾರಿಕೆಯಿಂದ ರಾಜ್ಯದಲ್ಲಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆರೋಗ್ಯ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾದರೆ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಸರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾಗಬೇಕು, ಶೋಭಾ ಕರಂದ್ಲಾಜೆಯನ್ನು ಸಚಿವೆ ಸ್ಥಾನದಿಂದ ಕೆಳಗಿಳಿಸಬೇಕೆಂದು ರೆಡ್ಡಿ ಸಹೋದರರ ಪಟಾಲಂ ಸೇರಿಕೊಂಡಿದ್ದ ರೇಣುಕಾಚಾರ್ಯ ಆಂಧ್ರದ ರೆಸಾರ್ಟ್‌ನಲ್ಲಿ ಇದ್ದು ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ಕೂಡ ಕೊಟ್ಟಿದ್ದರು. ಇದೀಗ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರೇಣುಕಾಚಾರ್ಯ ರೆಡ್ಡಿ ಸಹೋದರರ ವಿರುದ್ಧವೇ ವಾಗ್ದಾಳಿ ನಡೆಸುತ್ತಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.