ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆಯಲು ನಿರ್ಧರಿಸಿರುವ ಜೆಡಿಎಸ್ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ದಿ.ಚಂದ್ರಶೇಖರ ಪಾಟೀಲ ರೇವೂರರ ಪತ್ನಿ ಅರುಣಾ ಪಾಟೀಲ ಅವರನ್ನು ಕಣಕ್ಕಿಳಿಸಿದೆ.
ರೇವೂರ ಅವರ ನಿಧನದಿಂದ ತೆರವಾದ ಶಾಸಕ ಸ್ಥಾನಕ್ಕೆ ಸೆಪ್ಟೆಂಬರ್ 13ರಂದು ಚುನಾವಣೆ ನಡೆಯಲಿದೆ. ಆದರೆ ಬಿಜೆಪಿ ಶಾಸಕರಾಗಿದ್ದ ರೇವೂರ ಕುಟುಂಬಕ್ಕೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದ್ದರಿಂದ ಅದಕ್ಕೆ ತಕ್ಕ ಪ್ರತಿತಂತ್ರ ರೂಪಿಸಿರುವ ಜೆಡಿಎಸ್ ಇದೀಗ ರೇವೂರ ಪತ್ನಿ ಅರುಣಾ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿಯನ್ನು ಕಣಕ್ಕಿಳಿಸಿದೆ.
ಜೆಡಿಎಸ್ ಪಕ್ಷದ ವತಿಯಿಂದ ರೇವೂರ ಅವರ ಪತ್ನಿ ಅರುಣಾ ಪಾಟೀಲರನ್ನು ಕಣಕ್ಕಿಳಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಕಾರ್ಯಕರ್ತರ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದರು.
ಕಾಂಗ್ರೆಸ್‌ನಿಂದ ಧರಂ ಪುತ್ರ ಅಜಯ್ ಸಿಂಗ್: ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪುತ್ರ ಡಾ.ಅಜಯ್ ಸಿಂಗ್ ಅವರನ್ನು ಅಖಾಡಕ್ಕೆ ಇಳಿಸಿದೆ. ಅದೇ ರೀತಿ ಕಡೂರು ವಿಧಾನಸಭಾ ಕ್ಷೇತ್ರದಿಂದ ದಿವಂಗತ ಕೆ.ಎಂ.ಕೃಷ್ಣಮೂರ್ತಿ ಅವರ ಸಹೋದರ ಕೆ.ಎಂ.ಕೆಂಪರಾಜು ಅವರಿಗೆ ಟಿಕೆಟ್ ನೀಡಿದೆ.
ಬುಧವಾರ ಬೆಳಿಗ್ಗೆ ಬೆಂಬಲಿಗರೊಂದಿಗೆ ಆಗಮಿಸಿದ ಅಜಯ್ ಸಿಂಗ್ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಧರಂಸಿಂಗ್ ಸೇರಿದಂತೆ ಪಕ್ಷದ ಮುಖಂಡರು ಹಾಜರಿದ್ದರು.