ನಿತ್ಯಾನಂದ ಸ್ವಾಮಿ ಹಾಗೂ ಆಶ್ರಮದ ಸನ್ಯಾಸಿನಿಯರ ಚಾರಿತ್ರ್ಯವಧೆ ಮಾಡಿರುವ ಲೆನಿನ್ ಕರುಪ್ಪನ್ ವಿರುದ್ಧ ಪೊಲೀಸರು ಕೂಡಲೇ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ನಿತ್ಯಾನಂದ ಪರ ಬೆಂಬಲಿಗರು ಮಂಗಳವಾರ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಿತ್ಯಾನಂದ ಸ್ವಾಮಿ ಹಾಗೂ ಆಶ್ರಮದ ವಿರುದ್ಧ ಲೆನಿನ್ ಕರುಪ್ಪನ್ ಆರೋಪವನ್ನು ಬಹಿರಂಗವಾಗಿ, ಖಾಸಗಿಯಾಗಿ ಮುಂದುವರಿಸಿದ್ದಾನೆ. ಆ ನಿಟ್ಟಿನಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೋರಿ ಆಗೋಸ್ಟ್ 9ರಂದು ಸುಮಾರು 40 ಮಂದಿ ಭಕ್ತರು ಖಾಸಗಿಯಾಗಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಿತ್ಯಾನಂದ ಸ್ವಾಮಿ ನಟಿ ರಂಜಿತಾ ಸೇರಿದಂತೆ ಸನ್ಯಾಸಿನಿಯರು, ಸ್ಥಳೀಯ ಸುಮಾರು 40 ಮಂದಿ ಮಹಿಳೆಯರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಎಂಬ ಲೆನಿನ್ ಕರುಪ್ಪನ್‌ನ ಮಾಹಿತಿ ಆಧಾರದ ಮೇಲೆ ಖಾಸಗಿ ಟಿವಿ ಚಾನೆಲ್‌ಗಳು ಸುದ್ದಿ ಪ್ರಸಾರ ಮಾಡಿದ್ದವು. ಆ ಬಳಿಕ ಬಂಧನ, ಜೈಲುವಾಸ, ಇದೀಗ ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ರಾಸಲೀಲೆಯ ನಿತ್ಯಾನಂದ ಆಶ್ರಮದಲ್ಲಿ ಎಂದಿನಂತೆ ತನ್ನ ಪ್ರವಚನ, ಯೋಗಾಭ್ಯಾಸವನ್ನು ಮುಂದುವರಿಸಿದ್ದಾನೆ.
ಏತನ್ಮಧ್ಯೆ ಲೆನಿನ್ ಕರುಪ್ಪನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೂರು ನೀಡಿ 15 ದಿನ ಕಳೆದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿ ನಿತ್ಯಾನಂದನ ಭಕ್ತರು ಪ್ರತಿಭಟನೆ ನಡೆಸಿದ್ದರು.
ನಿತ್ಯಾನಂದನ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಂಬ ವಿಷಯ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯತ್ತ ತೆರಳಿದ್ದರು. ಈ ಸುದ್ದಿ ತಿಳಿದ ಕೂಡಲೇ ನಿತ್ಯಾನಂದನ ಭಕ್ತರು ಕಾಲ್ಕಿತ್ತಿದ್ದರು.