ಭ್ರಷ್ಟಾಚಾರಿಗಳನ್ನು ಗುಂಡು ಹೊಡೆದು ಸಾಯಿಸಬೇಕೆಂದು ಹೇಳಿಕೆ ನೀಡಿದ್ದ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡುವಲ್ಲಿ ಯಶಸ್ವಿಯಾದ ನಾಡೋಜ ಡಾ.ದೇಜಗೌ ಅವರು ಸ್ವತಃ ಪುತ್ರ ವ್ಯಾಮೋಹಕ್ಕೆ ಕಟ್ಟು ಬಿದ್ದು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಗ್ಗೆ ಎಬಿವಿಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಖ್ಯಾತ ಸಾಹಿತಿ ದೇಜಗೌ ಅವರ ಪುತ್ರ ಡಾ.ಜೆ.ಶಶಿಧರ್ ಪ್ರಸಾದ್ ಅವರು ಮೈಸೂರು ವಿವಿ ಕುಲಪತಿಯಾಗಿದ್ದ ಅವಧಿಯಲ್ಲಿ ತಮಗೆ ಬೇಕಾದ ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳುವ ಮೂಲಕ ರೋಸ್ಟರ್ ಪದ್ದತಿ ಹಾಗೂ ವಿವಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ.
ಈ ಬಗ್ಗೆ ತನಿಖೆಗಾಗಿ ರಾಜ್ಯ ಸರಕಾರ ರಂಗವಿಠಲಾಚಾರ್ ಅವರನ್ನು ನೇಮಿಸಿತ್ತು. ಇವರ ನೇತೃತ್ವದ ಸಮಿತಿ ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡಿದೆ. ವರದಿಯಲ್ಲಿ ಡಾ.ಶಶಿಧರ್ ಅವರ ಅವಧಿಯಲ್ಲಿ ಅಕ್ರಮ ನೇಮಕಾತಿ ನಡೆದಿರುವುದು ಸಾಬೀತಾಗಿದೆ. ಆ ನಿಟ್ಟಿನಲ್ಲಿ ಅಕ್ರಮವಾಗಿ ನೇಮಕಾತಿ ಆದ ಅಧ್ಯಾಪಕರನ್ನು ವಜಾಗೊಳಿಸಿ ಕುಲಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿತ್ತು.
ಆದರೆ ಪುತ್ರ ವ್ಯಾಮೋಹಕ್ಕೆ ಸಿಕ್ಕ ದೇಜಗೌ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಮಿತಿಯ ಶಿಫಾರಸು ಕೈಬಿಡಬೇಕೆಂದು ಆಗ್ರಹಿಸಿರುವ ದೇಜಗೌ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸರಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಏತನ್ಮಧ್ಯೆ, ಹಿರಿಯ ಸಾಹಿತಿ ದೇಜಗೌ ಅವರು ತಪ್ಪು ಮಾಡಿದವರನ್ನು ತಿದ್ದಿ ಸರಿ ದಾರಿಗೆ ತರಬೇಕಾದವರು. ಅವರೇ ಈ ರೀತಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಸರಿಯಲ್ಲ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ದೇಜಗೌ ಅವರು ಪುತ್ರ ವ್ಯಾಮೋಹವನ್ನು ಖಂಡಿಸಿರುವ ಎಬಿವಿಪಿ ಬುಧವಾರ ಪ್ರತಿಭಟನೆ ನಡೆಸಿ, ದೇಜಗೌ ವಿರುದ್ದ ವಾಗ್ದಾಳಿ ನಡೆಸಿದೆ. ಭ್ರಷ್ಟಚಾರದ ವಿರುದ್ಧ ಹೋರಾಡುತ್ತಿದ್ದ ದೇಜಗೌ ತನ್ನ ಪುತ್ರನ ಬೆಂಬಲಕ್ಕೆ ನಿಂತಿರುವುದು ಸರಿಯಲ್ಲ ಎಂದು ಎಬಿವಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.