ಈಗಿರುವ ಪಠ್ಯಕ್ರಮಗಳಲ್ಲಿ ಉದ್ಯೋಗ ಕಲ್ಪಿಸುವ ಅಂಶಗಳು ಕಡಿಮೆ ಇರುವ ಕಾರಣ ಹೊಸ ಪಠ್ಯ ರಚಿಸಲು ಇಲಾಖೆ ನಿರ್ಧರಿಸಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಚಳ್ಳಕೆರೆಯಲ್ಲಿ ರಾಜ್ಯಮಟ್ಟದ ಸಮಾಜ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, 1ರಿಂದ 10ನೇ ತರಗತಿವರೆಗೆ ಸಿಬಿಎಸ್‌ಸಿ, ಐಸಿಎಸ್‍ಸಿಗಿಂತಲೂ ಗುಣಮಟ್ಟದ ಪಠ್ಯಪುಸ್ತಕ ರಚಿಸಲು ಇಲಾಖೆ ನಿರ್ಧರಿಸಿದೆ ಎಂದರು.
ಪಠ್ಯ ಪುಸ್ತಕಗಳ ರಚನೆಗೆ 300 ಕ್ಕೂ ಹೆಚ್ಚು ಪರಿಣತ ತಜ್ಞರ ತಂಡ ರಚಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ, ವ್ಯಾಪಾರಿಗಳ ಅಸಹಕಾರದಿಂದ ಪುಸ್ತಕಗಳ ವಿತರಣೆಯಲ್ಲಿ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರಬಲ ಪ್ರತಿಸ್ಪರ್ಧೆ ನೀಡುವ ಮೂಲಕ ಇಲಾಖೆ ಪ್ರತಿಷ್ಠೆ ಹೆಚ್ಚಿಸಬೇಕಾಗಿದೆ. ಇದಕ್ಕಾಗಿ ನಾನಾ ಯೋಜನೆ ಸಿದ್ಧಪಡಿಸಿದ್ದು, ಅವನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವಂತೆ ಶಿಕ್ಷಕರಿಗೆ, ಅಧಿಕಾರಿಗಳಿಗೆ ಸಲಹೆ ನೀಡಿದರು.
1995ರವರೆಗೆ ಪ್ರಾರಂಭವಾದ ಖಾಸಗಿ ಶಾಲಾ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸುವ ನಿರ್ಧಾರಕ್ಕೆ ಸರಕಾರ ಬದ್ಧವಾಗಿದೆ. ಆರ್ಥಿಕ ಮಿತವ್ಯಯ ಜಾರಿಯಲ್ಲಿರುವ ಕಾರಣ ಕೆಲ ಶಾಲೆಗಳಿಗೆ ಅನುದಾನ ಬಿಡುಗಡೆ ವಿಳಂಬವಾಗಿದೆ. ಈ ಬಗ್ಗೆ ಯಡಿಯೂರಪ್ಪ ಜತೆ ಚರ್ಚಿಸಿ ಶೀಘ್ರ ಅನುದಾನ ನೀಡಲಾಗುವುದು. ಜೆಒಸಿ ಶಿಕ್ಷಕರನ್ನು ಕಾಯಂಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.