ಪರಿಸರ ಸಂರಕ್ಷಣೆ ಹಾಗೂ ಅಕ್ರಮ ವ್ಯವಹಾರ ತಡೆಗಟ್ಟುವ ದೃಷ್ಟಿಯಿಂದ ಎಲ್ಲ ಮರಳು ಸಾಗಾಟಗಾರರು ಲಾರಿಗಳಿಗೆ ಕೂಡಲೇ ಜಿಪಿಎಸ್ (ಗ್ಲೋಬಲ್ ಪೊಶಿಶನಿಂಗ್ ಸಿಸ್ಟಮ್) ಯಂತ್ರ ಅಳವಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಸೂಚನೆ ನೀಡಿದ್ದಾರೆ.
ಪುರಭವನದಲ್ಲಿ ದಕ್ಷಿಣ ಕನ್ನಡ ಮರಳು ಗುತ್ತಿಗೆದಾರರು, ಹೊಯ್ಗೆ ದೋಣಿ ಮಾಲೀಕರು, ಕಾರ್ಮಿಕರು ಮತ್ತು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಮಾಲೀಕರ ಜಂಟಿ ಕ್ರಿಯಾ ಸಮಿತಿ ಉದ್ಘಾಟನೆ, ಜಿಪಿಎಸ್ ಯಂತ್ರಕ್ಕೆ ಚಾಲನೆ ಹಾಗೂ ಮರಳು ಸಾಗಾಟ ಕಾರ್ಯಾಗಾರ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಆಸಕ್ತಿ ಮತ್ತು ಲಾರಿ ಮಾಲೀಕರ ಸಹಕಾರದಿಂದ ಜಿಪಿಎಸ್ ಅಳವಡಿಕೆ ಸಾಧ್ಯವಾಗಿದೆ. ಇದರಿಂದ ಪ್ರಾಮಾಣಿಕ ವ್ಯಾಪಾರಸ್ಥರಿಗೆ ಯಾವ ಸಮಸ್ಯೆಯೂ ಆಗದು. ಜಿಲ್ಲೆಯ 550 ಲಾರಿ ಮಾಲೀಕರು ಜಿಪಿಎಸ್ ಅಳವಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅಳವಡಿಸದಿದ್ದರೆ ಕಾನೂನು ಬಾಹಿರವಾಗುತ್ತದೆ. ಒಂದು ವೇಳೆ ಲಾರಿ ಮುಟ್ಟುಗೋಲು ಹಾಕಿ, ಮರಳುಗಾರಿಕೆ ಲೈಸೆನ್ಸ್ ರದ್ದುಪಡಿಸಿದರೆ ರಾಜಕಾರಣಿಗಳ ಬಳಿಗೆ ಬರಬೇಡಿ ತಾಕೀತು ಮಾಡಿದರು.
ಮರಳುಗಾರಿಕೆ ವ್ಯಾಪಾರವಾಗಿ ಇರಬೇಕೇ ವಿನಃ ಅಕ್ರಮ ಧಂದೆಯಾಗಬಾರದು. ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮರಳು ವ್ಯವಹಾರಕ್ಕೆ ಇತ್ತೀಚೆಗೆ ಕಳ್ಳಭಟ್ಟಿಯಂತಹ ಕಳಂಕ ತಟ್ಟಿತ್ತು. ಅದಕ್ಕೆ ಜಿಲ್ಲಾಧಿಕಾರಿ ಸೂಕ್ತ ಪರಿಹಾರ ಕಂಡುಕೊಂಡಿದ್ದಾರೆ. ವ್ಯಾಪಾರಿಗಳು ಕಾನೂನಿಗೆ ಸಹಕಾರ ನೀಡಬೇಕು. ಅಕ್ರಮ ದಾಸ್ತಾನಿಟ್ಟು ಕೃತಕ ಅಭಾವ ಸೃಷ್ಟಿ ಬೆಲೆ ಏರುವಂತಹ ವಾತಾವರಣ ಸೃಷ್ಟಿಸಬೇಡಿ ಎಂದು ಈ ಸಂದರ್ಭದಲ್ಲಿ ಹೇಳಿದರು.