ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪದೇ, ಪದೇ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಬೇಕು ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಸಲಹೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರಸ್ಕರಿಸಿದ್ದಾರೆ.
ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರು ಗಡಿ ವಿವಾದ ಕುರಿತು ಪ್ರಶ್ನಿಸಿದಾಗ, ಇದು ಮುಗಿದ ಅಧ್ಯಾಯ. ಮಹಾಜನ್ ವರದಿಯೇ ಅಂತಿಮ. ಹಾಗಾಗಿ ಪ್ರಧಾನಮಂತ್ರಿ ಮಧ್ಯಸ್ಥಿಕೆ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗಡಿ ತಂಟೆ ಕುರಿತು ಗಡ್ಕರಿ ಅವರ ಸಲಹೆ ಒಪ್ಪಲು ಸಾಧ್ಯವಿಲ್ಲ, ಆ ಬಗ್ಗೆ ನಾನು ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಮಹಾರಾಷ್ಟ್ರ ಬಿಜೆಪಿ ಘಟಕ ಕೂಡ ನನ್ನ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ, ಕಾರವಾರ ತಮಗೆ ಸೇರಿದ್ದು ಎಂದು ವಾದಿಸುವ ಮಹಾರಾಷ್ಟ್ರದ ವಾದ ಉದ್ದಟತನದ್ದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಇದರಲ್ಲಿ ಮಹಾಜನ್ ವರದಿಯೇ ಅಂತಿಮ. ಅಷ್ಟೇ ಅಲ್ಲ ಗಡಿ ತಂಟೆ ಮುಗಿದ ಅಧ್ಯಾಯವಾಗಿದೆ ಎಂದರು.