ಮೈಸೂರು ವಿವಿ ವಿಶ್ರಾಂತ ಕುಲಪತಿ, ಪುತ್ರ ಡಾ.ಜೆ.ಶಶಿಧರ್ ಪ್ರಸಾದ್ ಅವರ ವಿರುದ್ಧ ಅನಾವಶ್ಯಕವಾಗಿ ಆರೋಪ ಹೊರಿಸಲಾಗಿದೆ ಎಂದು ವಿರೋಧಿಸಿ ಹಿರಿಯ ಸಾಹಿತಿ ದೇಜಗೌ ಅವರು ಬುಧವಾರ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಸಾಹಿತಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಜಗೌ ಅವರು ಕರ್ನಾಟಕ ರತ್ನ ಪ್ರಶಸ್ತಿ ಭಾಜನರು. ಆದರೆ ಅವರೇ ತಮ್ಮ ಪುತ್ರನ ಪರ ವಕಾಲತ್ತು ವಹಿಸಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಗಾಂಧೀಜಿಗೆ ಅವಮಾನ ಮಾಡಿದ್ದಾರೆ ಎಂದು ಸಾಹಿತಿ ಚಂದ್ರಶೇಖರ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಜಗೌ ಅವರ ಉಪವಾಸ ಸತ್ಯಾಗ್ರಹ ಕೇವಲ ಬೂಟಾಟಿಕೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಕೆ.ಎಸ್.ಭಗವಾನ್ ಕೂಡ ದೇಜಗೌ ಅವರ ಉಪವಾಸ ಸತ್ಯಾಗ್ರಹಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಉಪವಾಸದಿಂದ ಆರೋಪ ಸುಳ್ಳಾಗದು. ಪ್ರಕರಣದ ಸಂಬಂಧ ತನಿಖೆ ಮುಂದುವರಿಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಟ್ಟಾರೆ ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ದೇಜಗೌ ಅವರು ತಮ್ಮ ಪುತ್ರನ ಭ್ರಷ್ಟಚಾರ ಮುಚ್ಚಿಹಾಕಲು ಉಪವಾಸ ಸತ್ಯಾಗ್ರಹ ನಡೆಸಿದ್ದಕ್ಕೆ ರಾಜ್ಯದ ಕೆಲವು ಸಾಹಿತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಜಗೌ ಅವರ ಪುತ್ರ ಡಾ.ಜೆ.ಶಶಿಧರ್ ಪ್ರಸಾದ್ ಅವರು ಮೈಸೂರು ವಿವಿ ಕುಲಪತಿಯಾಗಿದ್ದ ಅವಧಿಯಲ್ಲಿ ತಮಗೆ ಬೇಕಾದ ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳುವ ಮೂಲಕ ರೋಸ್ಟರ್ ಪದ್ದತಿ ಹಾಗೂ ವಿವಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ.
ಈ ಬಗ್ಗೆ ತನಿಖೆಗಾಗಿ ರಾಜ್ಯ ಸರಕಾರ ರಂಗವಿಠಲಾಚಾರ್ ಅವರನ್ನು ನೇಮಿಸಿತ್ತು. ಇವರ ನೇತೃತ್ವದ ಸಮಿತಿ ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡಿದೆ. ವರದಿಯಲ್ಲಿ ಡಾ.ಶಶಿಧರ್ ಅವರ ಅವಧಿಯಲ್ಲಿ ಅಕ್ರಮ ನೇಮಕಾತಿ ನಡೆದಿರುವುದು ಸಾಬೀತಾಗಿದೆ. ಆ ನಿಟ್ಟಿನಲ್ಲಿ ಅಕ್ರಮವಾಗಿ ನೇಮಕಾತಿ ಆದ ಅಧ್ಯಾಪಕರನ್ನು ವಜಾಗೊಳಿಸಿ ಕುಲಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿತ್ತು.