ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗಾಗಿ 15 ಕೋಟಿ ರೂ.ಮಂಜೂರು ಮಾಡಲಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಖಾತೆ ಸಚಿವ ಗೂಳಿಹಟ್ಟಿ ಡಿ. ಶೇಖರ್ ತಿಳಿಸಿದ್ದಾರೆ.
ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕೃಷಿ ಉತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕಳೆದ ಸಾಲಿನ ಬಜೆಟ್‌ನಲ್ಲಿ ನೀಡಲಾದ ಅನುದಾನವನ್ನು ಕ್ರೀಡಾ ಇಲಾಖೆ ಶೇ.98ರಷ್ಟು ಬಳಕೆ ಮಾಡಿದೆ, 1.50 ಕೋಟಿ ರೂ ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಈಜುಕೊಳದ ಉದ್ಘಾಟನೆ ಹಾಗೂ ವಾಣಿವಿಲಾಸ ಸಾಗರ ಹಿನ್ನೀರಿನ ಲಕ್ಕಿಹಳ್ಳಿ ಸಮೀಪ ಮೂರು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜಲಸಾಹಕ ಕ್ರೀಡಾ ಕೇಂದ್ರಕ್ಕೆ ಸೆಪ್ಟಂಬರ್ ಮೊದಲ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಸರಕಾರಿ ಸ್ವಾಮ್ಯದಲ್ಲಿರುವ ವಿದ್ಯುತ್ ನಿಗಮ ಕಳೆದ ಸಾಲಿನಲ್ಲಿ 1.60 ಕೋಟಿ ರೂ.ಲಾಭ ಗಳಿಸಿದೆ. ನೇಕಾರರಿಗೆ ನೀಡುವ ಸೌಲಭ್ಯವನ್ನು ವಿದ್ಯುತ್ ಕೈಮಗ್ಗ ಬಳಸುವ ನೇಕಾರರಿಗೂ ಒದಗಿಸಲಾಗುವುದು, ತಾಲೂಕಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಗಾರ್ಮೆಂಟ್ಸ್ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಪ್ರಮುಖ ರಸ್ತೆಯ ಅಭಿವೃದ್ದಿಗಾಗಿ 6 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಒಂದು ಕೋಟಿ ರೂ. ವೆಚ್ಚದ ಮುಖ್ಯರಸ್ತೆಯ ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.