ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರಕಾರ ರಾಷ್ಟ್ರಪತಿಯವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯಿದೆ ಜಾರಿಗೆ ತರುವ ಮೂಲಕ ಒಂದು ಸಮುದಾಯದ ಆಹಾರ ಪದ್ಧತಿಯನ್ನು ಬಿಜೆಪಿ ಸರಕಾರ ಒತ್ತಾಯಪೂರ್ವಕವಾಗಿ ಕಸಿದುಕೊಳ್ಳಲು ಹುನ್ನಾರ ನಡೆಸಿದೆ. ಮಸೂದೆಗೆ ಅಂಕಿತ ಹಾಕದಿದ್ದರೆ ರಾಷ್ಟ್ರಪತಿ ಕಚೇರಿಯಲ್ಲಿ ಧರಣಿ ನಡೆಸುವುದಾಗಿ ಬಿಜೆಪಿ ಸರಕಾರ ಬೆದರಿಕೆ ಹಾಕುತ್ತಿದೆ. ರಾಷ್ಟ್ರಪತಿ ಮೇಲೆ ನಾನಾ ಒತ್ತಡಗಳನ್ನು ಹೇರುತ್ತಿದೆ. ಕಾಯಿದೆ ಜಾರಿಗೊಳಿಸಿ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ರಾಜ್ಯ ಸರಕಾರವೇ ಶಾಮೀಲಾಗಿದೆ. ರಾಜ್ಯದಲ್ಲಿ ಎಲ್ಲೂ ಅಕ್ರಮ ಗಣಿಗಾರಿಕೆ ನಿಂತಿಲ್ಲ, ಅದು ಮುಂದುವರಿದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿ ವಿಫಲವಾಗಿದ್ದಾರೆ. ಸರಕಾರವೇ ಅಕ್ರಮ ಗಣಿಗಾರಿಕೆಗೆ ಬೆಂಗಾವಲಾಗಿ ನಿಂತಿದೆ. ಈ ಮೂಲಕ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದೆ ಎಂದು ಸರಕಾರದ ವಿರುದ್ಧ ಹರಿಹಾಯ್ದರು.
ಅದಿರು ರಫ್ತು ಸಾಗಣೆ ನಿಷೇಧ ಕೇವಲ ಒಂದು ನಾಟಕ. ಸರಕಾರದಿಂದ ಹಿಂದೆಂದೂ ಕಂಡರಿಯದಷ್ಟು ಭೂಹಗರಣ ನಡೆದಿದೆ. ಬಿಜೆಪಿ ಸರಕಾರ ಕೇವಲ ಆಶ್ವಾಸನೆಯಲ್ಲಿಯೇ ಕಾಲಹರಣ ಮಾಡುತ್ತಿದೆ. ಕಳೆದ ಎರಡು ವರ್ಷದ ಅವಯಲ್ಲಿ ಎಲ್ಲ ಕ್ಷೇತ್ರದಲ್ಲಿ ವಿಫಲವಾಗಿದೆ. ರಾಜ್ಯದ ಜನ ಮೂಲಭೂತ ಸೌಲಭ್ಯಕ್ಕಾಗಿ ಪರಿತಪಿಸುತ್ತಿದ್ದಾರೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.