ಕರಾವಳಿಯ ನೆಮ್ಮದಿ ಕೆಡಿಸಿದ್ದ ಕೋಮುಗಲಭೆ ಮಟ್ಟ ಹಾಕುವುದು ಕಷ್ಟವಾಗಿತ್ತು. ಅದಕ್ಕಾಗಿ ಹಿಂದೂ- ಮುಸ್ಲಿಂ ಮೂಲಭೂತವಾದಿ ಸಂಘಟನೆ ಮುಖಂಡರನ್ನು ಕರೆದು ಎಚ್ಚರಿಕೆ ನೀಡಿದ್ದೇವೆ. ಇನ್ನೂ ಕೆಲವರು ಸಭ್ಯ ನಾಗರಿಕರ ಸೋಗಿನಲ್ಲಿ ಕೋಮು ಪ್ರಚೋದನೆ ಕೆಲಸ ಮಾಡುತ್ತಿದ್ದು, ಅವರ ಮೇಲೆ ಇಲಾಖೆ ನಿಗಾ ಇರಿಸಿದೆ ಎಂದು ಪಶ್ಚಿಮ ವಲಯ ನಿರ್ಗಮನ ಪೊಲೀಸ್ ಮಹಾನಿರೀಕ್ಷಕ ಗೋಪಾಲ್ ಬಿ. ಹೊಸೂರ್ ತಿಳಿಸಿದ್ದಾರೆ.
ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಹುದ್ದೆಗೆ ವರ್ಗಾವಣೆಯಾಗಿ ತೆರಳುತ್ತಿರುವ ಅವರು, ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಚಹಾ ಕೂಟದ ವೇಳೆ ತಮ್ಮ ಒಂದೂವರೆ ವರ್ಷದ ಅನುಭವಗಳನ್ನು ಬಿಚ್ಚಿಟ್ಟರು.
ಒಂದೂವರೆ ವರ್ಷ ಹಿಂದೆ ಮಂಗಳೂರಿಗೆ ಬಂದಾಗ ಎಲ್ಲವೂ ಹೊಸತು. ಇಲ್ಲಿಯ ಮಾಧ್ಯಮಗಳು. ನಾಗರಿಕ ಸಮಾಜ ಬಹಳಷ್ಟು ಕ್ರಿಯಾಶೀಲ. ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಸಕಾರಾತ್ಮಕವಾಗಿ ಸ್ಪಂದಿಸುವವರು. ಧಾರ್ಮಿಕ ಮುಖಂಡರು, ಜನರು, ಮಾಧ್ಯಮಗಳು ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಇಡುವಂತಹ ಕೆಲಸ ಮಾಡಿದ್ದಾರೆ. ರಾಜ್ಯದ ಯಾವ ಭಾಗದಲ್ಲೂ ಇಂತಹ ನಾಗರಿಕ ಪ್ರಜ್ಞೆ ಕಾಣಲು ಸಾಧ್ಯವಿಲ್ಲ ಎಂದರು.
ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಜಾತಿ, ಪಕ್ಷ ನೋಡಬೇಡಿ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬೇಡಿ ಎಂಬುದು ಡಿಜಿಪಿ ಅಜಯ್ ಕುಮಾರ್ ಸಿಂಗ್ ಸ್ಪಷ್ಟ ನಿರ್ದೇಶನವಾಗಿತ್ತು. ಅವರು 14 ಬಾರಿ ಜಿಲ್ಲೆಗೆ ಭೇಟಿ ನೀಡಿ, ಇಲ್ಲಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕಾಗಿ ಮಾರ್ಗದರ್ಶನ ನೀಡಿದ್ದಾರೆ. ಅದನ್ನೆಲ್ಲಾ ಸರಿಯಾಗಿ ಪಾಲಿಸಿದ್ದೇವೆ ಎಂದು ಹೇಳಿದರು.