ಬೆಂಗಳೂರು ಸರಣಿ ಸ್ಫೋಟದ ಆರೋಪಿ ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮದನಿಯನ್ನು ಸಿಸಿಬಿ ಪೊಲೀಸರು ಗುರುವಾರ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮದನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಳೆದ ಹತ್ತು ದಿನಗಳಿಂದ ಸಿಸಿಬಿ ಪೊಲೀಸರ ವಶದಲ್ಲಿದ್ದ ಮದನಿಯನ್ನು ಬೆಂಗಳೂರು ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದರು. ಇಂದು ಮದನಿಯ ಬಂಧನದ ಅವಧಿ ಮುಕ್ತಾಯಗೊಂಡಿದ್ದರಿಂದ ಕೋರ್ಟ್‌ಗೆ ಹಾಜರುಪಡಿಸಿದ್ದರು.
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿಯ ವಿಚಾರಣೆ ಪೂರ್ಣಗೊಂಡಿದ್ದರಿಂದ ಮತ್ತೆ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಸಲ್ಲಿಸಿಲ್ಲ. ಹಾಗಾಗಿ ನ್ಯಾಯಾಲಯ ಮದನಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಸ್ಫೋಟದ ರೂವಾರಿ ತಾನೇ ಆಗಿದ್ದು, ಪ್ರಮುಖ ಆರೋಪಿ ಟಿ.ನಾಸಿರ್ ಜೊತೆಯೂ ಸಂಪರ್ಕ ಇರುವುದಾಗಿ ಮದನಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಮದನಿ ಆರಂಭದಲ್ಲಿ ತನಿಖೆಗೆ ಅಸಹಕಾರ ನೀಡಿದ್ದ, ನಂತರ ಪುರಾವೆಗಳ ಸಹಿತ ಪ್ರಶ್ನಿಸಿದಾಗ ವಿಷಯವನ್ನು ಬಾಯ್ಬಿಟ್ಟಿರುವುದಾಗಿ ವಿವರಿಸಿದ್ದಾರೆ.
ಪೊಲೀಸರಿಂದ ತೊಂದರೆಯಾಗಿಲ್ಲ-ಮದನಿ: ವಿಚಾರಣೆ ವೇಳೆ ತನಗೆ ಸರಕಾರಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಅಬ್ದುಲ್ ನಾಸಿರ್ ಮದನಿ ಕೋರ್ಟ್‌ಗೆ ತಿಳಿಸಿದ್ದಾನೆ. ಆದರೆ ಪೊಲೀಸರಿಂದ ತನಗೆ ಯಾವುದೇ ತೊಂದರೆಯಾಗಿಲ್ಲ ಎಂದಿರುವ ಮದನಿ, ತನಗೆ ಸಕ್ಕರೆ ಖಾಯಿಲೆ ಇರುವುದರಿಂದ ಸೂಕ್ತ ತಪಾಸಣೆ, ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾನೆ.
ಮದನಿಯ ಅಹವಾಲು ಆಲಿಸಿದ ನ್ಯಾಯಾಲಯ, ಆತನಿಗೆ ಸೂಕ್ತ ವೈದ್ಯಕೀಯ ನೆರವು ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದೆ.