ಜನಪ್ರತಿನಿಧಿಗಳು ಸಾರ್ವಜನಿಕವಾಗಿ ವಿವೇಚನೆ ಇಲ್ಲದೆ ಮಾತನಾಡಿ, ಅಸಭ್ಯವಾಗಿ ವರ್ತಿಸುವ ಮೂಲಕ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಹೋದ್ಯೋಗಿಗಳು ಮತ್ತು ಶಾಸಕರಿಗೆ ಸಲಹೆ ನೀಡಿದ್ದಾರೆ.
ವಿವೇಚನೆಯಿಲ್ಲದ ನಡವಳಿಕೆಯಿಂದ ಮುಜುಗರ ಪರಿಸ್ಥಿತಿ ಸೃಷ್ಟಿಸದೆ, ಜನರ ಜತೆ ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಆಸರೆ ಯೋಜನೆಯಲ್ಲಿ ಕೊಂಗವಾಡದಲ್ಲಿ ನಿರ್ಮಿಸಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸಚಿವರು(ಬಚ್ಚೇಗೌಡ), ಶಾಸಕರು(ಪ್ರಹ್ಲಾದ್ ರೇಮಾನೆ) ಮಾಡುವ ಆವಾಂತರಗಳಿಗೆ ತಾವು ಕ್ಷಮೆ ಕೇಳುತ್ತೀರಿ. ಆದರೆ ತಪ್ಪು ಮಾಡುವವರು ಕ್ಷಮೆ ಕೇಳುವುದಿಲ್ಲವಲ್ಲ ಎಂಬ ಪ್ರಶ್ನೆಗೆ, ಇನ್ನು ಮುಂದಾದರು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸದಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದರು.
ಕ್ರೈಸ್ತರಿಗೆ ನೋವುಂಟಾಗುವಂತೆ ಹೇಳಿಕೆ ನೀಡಿರುವ ಶಾಸಕ ರೇಮಾನೆ ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಇದು ನನ್ನ ಗಮನಕ್ಕೆ ಬಂದಿಲ್ಲ ಎಂದು ಜಾರಿಕೊಂಡರು.