ಅಕ್ರಮ ಗಣಿ ವಿರುದ್ಧ ಹೋರಾಡುವ ಮಾಡುವ, ಗೋ ಹತ್ಯೆ ನಿಷೇಧ ವಿರೋಧಿಸುವ ಸೋ ಕಾಲ್ಡ್ ಸಾಹಿತಿಗಳು, ಬುದ್ದಿಜೀವಿಗಳು, ಪ್ರಗತಿಪರರು, ರೈತ ಮುಖಂಡರು ಹಾಗೂ ಮಠಾಧಿಪತಿಗಳು ಭಿಕ್ಷುಕರ ಕೇಂದ್ರದಲ್ಲಿನ ಸರಣಿ ಸಾವಿನ ಬಗ್ಗೆ ಮೌನ ವಹಿಸಿರುವುದು ಯಾಕೆ ಎಂದು ವಾಟಾಳ್ ನಾಗರಾಜ್ ಖಾರವಾಗಿ ಪ್ರಶ್ನಿಸಿದ್ದಾರೆ.
ಭಿಕ್ಷುಕರ ಸಾವಿನ ಬಗ್ಗೆ ಚಕಾರ ಎತ್ತದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿರುವ ವಾಟಾಳ್, ನರಕದಲ್ಲಿ ನೀಡುವ ಶಿಕ್ಷೆಯನ್ನು ಅಧಿಕಾರಿಗಳು ಭಿಕ್ಷುಕರಿಗೆ ಇಲ್ಲೇ ತೋರಿಸಿದ್ದಾರೆ. ಇಂತಹ ಅಮಾನವೀಯ ಘಟನೆ ಬಗ್ಗೆ ಎಲ್ಲರೂ ಪ್ರತಿಭಟನೆ ನಡೆಸಬೇಕಾಗಿರುವುದು ಅತ್ಯಗತ್ಯ ಎಂದರು.
ಭಿಕ್ಷುಕರ ಕೇಂದ್ರದಲ್ಲಿನ ಸರಣಿ ಸಾವು ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕಾನೂನು ಹೋರಾಟ ನಡೆಸಲು ಕನ್ನಡ ಚಳವಳಿ ವಾಟಾಳ್ ಪಕ್ಷ ಸಿದ್ದವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಕೇಂದ್ರದ ಬೆಲೆ ಬಾಳುವ ಜಮೀನು ಕಬಳಿಸುವ ಹುನ್ನಾರ ನಡೆದಿದೆ. ಸರಕಾರ ದರೋಡೆ ಮತ್ತು ಲೂಟಿಯಲ್ಲಿ ತೊಡಗಿದೆ. ಕೆರೆ, ಪಾರ್ಕ್, ರಸ್ತೆಗಳನ್ನು ಕಬಳಿಸಿರುವ ಪ್ರಭಾವಿ ಕುಳಗಲು ಈಗ ಭಿಕ್ಷುಕರ ಪುನರ್ವಸತಿ ಕೇಂದ್ರದ ಜಾಗ ಕಬಳಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಜಾಗವನ್ನು ಪರಭಾರೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.