ಪ್ರಕೃತಿಯಲ್ಲಿ ಹಲವಾರು ವೈಚಿತ್ರ್ಯಗಳು ಕಾಣಸಿಗುವಂತೆ, ಕೆಲವು ಮನುಷ್ಯರಲ್ಲಿಯೂ ಅಂತಹ ವೈಚಿತ್ರ್ಯ ಕಾಣಿಸಿಕೊಳ್ಳುವ ಮೂಲಕ ವಿಜ್ಞಾನಕ್ಕೆ ಸವಾಲಾಗುವ ಉದಾಹರಣೆಯೂ ಇದೆ. ಇದೀಗ ಉದ್ಯಾನನಗರಿಯಲ್ಲಿನ ಅಜ್ಜಿಯೊಬ್ಬರು ಕಳೆದ 78 ವರ್ಷಗಳಿಂದ ಒಂದು ತೊಟ್ಟು ನೀರು ಕುಡಿಯದೇ ಜೀವಿಸಿರುವ ಅಚ್ಚರಿ ವಿಷಯವೊಂದು ಬಯಲಾಗಿದೆ.
ಹನುಮಂತ ನಗರದ ನಿವಾಸಿಯಾಗಿರುವ ನರಸಮ್ಮ ಎಂಬವರೇ ಈ ಅಚ್ಚರಿಗೆ ಕಾರಣರಾದ ಅಜ್ಜಿ. ಅವರಿಗೆ ಈಗ 92 ವರ್ಷ. 14 ವರ್ಷದವರೆಗೆ ನೀರು ಕುಡಿಯುತ್ತಿದ್ದ ನರಸಮ್ಮ, ಆ ನಂತರ ಅವರಿಗೆ ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ವೈದ್ಯರಲ್ಲಿಯೂ ಚಿಕಿತ್ಸೆ ಪಡೆದಿದ್ದರು. ಆಗ ವೈದ್ಯರು ನರಸಮ್ಮ ಬದುಕುವುದಿಲ್ಲ ಎಂದು ತಿಳಿಸಿದ್ದರು. ಕೊನೆಗೆ ನರಸಮ್ಮ ನೀರು ಕುಡಿಯುವುದನ್ನೇ ಬಿಟ್ಟಿದ್ದರಂತೆ!
ಪ್ರತಿದಿನ ಎರಡು ಲೋಟ ಕಾಫಿ ಸೇವಿಸುತ್ತಾರೆಂದು ನರಸಮ್ಮ ಕುಟುಂಬದವರು ತಿಳಿಸಿದ್ದಾರೆ. ನರಸಮ್ಮ ಸುಮಾರು 78 ವರ್ಷಗಳಿಂದ ನೀರು ಕುಡಿಯದೇ ಆರೋಗ್ಯವಾಗಿಯೇ ಇದ್ದಾರೆ. ಯಾವುದೇ ಕಾಯಿಲೆಯೂ ಅವರನ್ನು ಬಾಧಿಸಿಲ್ಲವಂತೆ. ಗೋಡಂಬಿ, ಡ್ರೈಫ್ರುಟ್ಸ್ ಹೆಚ್ಚಾಗಿ ತಿನ್ನುವ ನರಸಮ್ಮ ಒಂದು ಬಾರಿ 38 ದಿನಗಳ ಉತ್ತರ ಭಾರತ ಪ್ರವಾಸವನ್ನು ಮುಗಿಸಿ ಬಂದಿದ್ದರು. ಆಗ ಮೂರು ಹೊತ್ತು ಕೇವಲ ಟೀ ಮಾತ್ರ ಕುಡಿದಿದ್ದರಂತೆ.
ಅಂತೂ ನೀರು ಕುಡಿಯದೇ ಇರುವುದರಿಂದ ಅಜ್ಜಿಗೆ ಯಾವುದೇ ಸಮಸ್ಯೆ ಕಾಡಿರುವುದನ್ನು ನಾವು ನೋಡಿಲ್ಲ ಎಂದು ಮೊಮ್ಮಕ್ಕಳು ಅಚ್ಚರಿ ವ್ಯಕ್ತಪಡಿಸುತ್ತಾರೆ. ಏನೇ ಇರಲಿ ಅಜ್ಜಿ ಇನ್ನಷ್ಟು ಕಾಲ ಆರೋಗ್ಯದಿಂದ ನಮ್ಮೊಂದಿಗೆ ಕಾಲ ಕಳೆಯಲಿ ಎಂಬುದು ಕುಟುಂಬದವರ ಆಶಯ.