ಸಕಾಲಕ್ಕೆ ರೈತರಿಗೆ ಬೆಳೆ ವಿಮೆ ದೊರಕಿಸಿಕೊಡುವ ಉದ್ದೇಶದಿಂದ ರಾಜ್ಯ ಸರಕಾರ ಶೀಘ್ರದಲ್ಲೇ ತನ್ನ ಪಾಲಿನ 50 ಕೋಟಿ ರೂ.ಗಳನ್ನು ವಿಮಾ ಸಂಸ್ಥೆಗಳಿಗೆ ಪಾವತಿಸಲಿದೆ. ಇದರಿಂದ ವಿಮಾ ಕಂಪನಿ ವತಿಯಿಂದ 167 ಕೋಟಿ ರೂ. ವಿಮಾ ಮೊತ್ತ ರೈತರಿಗೆ ಪರಿಹಾರ ರೂಪದಲ್ಲಿ ಸಂದಾಯವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ನವಲಗುಂದ ತಾಲೂಕಿನ ಕೊಂಗವಾಡ ಗ್ರಾಮದಲ್ಲಿ ಆಸರೆ ಯೋಜನೆಯಡಿ ನಿರ್ಮಿಸಿರುವ ಮನೆಗಳ ಹಸ್ತಾಂತರ, ನವಲಗುಂದದಲ್ಲಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ, ಮಲಪ್ರಭಾ ಬಲದಂಡೆ ಕಾಲುವೆ ನವೀಕರಣ ಕಾಮಗಾರಿಯ ಅಡಿಗಲ್ಲು, ನಬಾರ್ಡ್ ಯೋಜನೆಯಡಿ ಗುಂಡಗೇನಹಳ್ಳಕ್ಕೆ ಮತ್ತು ಹಂದಿಗನಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ, ಅಣ್ಣಿಗೇರಿಯಲ್ಲಿ ಪರಿವೀಕ್ಷಣಾ ಮಂದಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರೈತರಿಗೆ ಶೇ.2ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇದೇ ಮಾದರಿಯಲ್ಲಿ ಇನ್ನಿತರ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳೂ ರೈತರಿಗೆ ಸಾಲ ನೀಡುವಂತೆ ಒತ್ತಾಯಿಸುವುದಕ್ಕಾಗಿ ಬೆಂಗಳೂರಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಬ್ಯಾಂಕರ್ಸ್‌ಗಳ ಸಭೆ ಕರೆಯಲಾಗುವುದು ಎಂದರು.
ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳಾದ ತಾಯಿ ಹಾಗೂ ಮಗುವಿನ ಆರೋಗ್ಯ ತಪಾಸಣೆಯನ್ನು ಬರುವ ತಿಂಗಳು 20ರ ನಂತರ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುವುದು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಹಾಲಿನ ಪ್ಯಾಕೆಟ್, ಆರೋಗ್ಯ ಕಾರ್ಡ್, ಸೀರೆ ಸೇರಿದಂತೆ ಇನ್ನಿತರ ಕಾಣಿಕೆಗಳನ್ನು ನೀಡಲಾಗುವುದು. ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿ ಪ್ರತಿ ಹೆಣ್ಣು ಮಗು 18 ವರ್ಷ ಆಗುವವರೆಗೂ ಆಕೆಯ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇದರಿಂದ ಬಡ ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳೂ ಸಂಪೂರ್ಣ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.