ಮಲೇರಿಯಾ, ಡೇಂಘೀ, ಚಿಕೂನ್‌ಗುನ್ಯಾ, ಎಚ್1ಎನ್1ನಂತಹ ಸಾಂಕ್ರಾಮಿಕ ರೋಗಗಳಿಂದ ಸಾವು ಸಂಭವಿಸಿದರೆ ಆಯಾ ಜಿಲ್ಲೆಗಳ ಜಿಲ್ಲಾ ಸರ್ಜನ್ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 147, ತುಮಕೂರಿನ 101 ಸೇರಿದಂತೆ 927 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಈವರೆಗೆ ಈ ರೋಗದಿಂದ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್1ಎನ್1 ಸೋಂಕಿನ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈವರೆಗೆ 1702 ಮಂದಿಗೆ ಸೋಂಕಿರುವುದು ಪತ್ತೆಯಾಗಿದ್ದು, 95 ಮಂದಿ ಎಚ್1ಎನ್1ನಿಂದ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರನ್ನು ಆರಂಭದಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಇತ್ತೀಚೆಗೆ ಸೋಂಕು ನಿಯಂತ್ರಣದಲ್ಲಿರುವುದರಿಂದ ತಪಾಸಣಾ ಕಾರ್ಯ ಅನಗತ್ಯ ಎಂದು ಕೇಂದ್ರ ಸರಕಾರ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ವಿಮಾನ ನಿಲ್ದಾಣಗಳಲ್ಲಿ ತಪಾಸಣಾ ಕಾರ್ಯ ನಡೆಯುತ್ತಿಲ್ಲ ಎಂದರು.
ಸಾಂಕ್ರಾಮಿಕ ರೋಗಗಳ ಪತ್ತೆಗಾಗಿ ರಾಷ್ಟ್ರೀಯ ವೈರಾಣು ಸಂಸ್ಥೆ ವಿಕ್ಟೋರಿಯಾ, ನಿಮಾನ್ಸ್ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದೆ. ರೋಗದ ಸೂಚನೆ ಕಂಡು ಬಂದಾಗ ಕೆಲವು ರೋಗಿಗಳನ್ನಷ್ಟೇ ತಪಾಸಣೆ ಮಾಡಿ ನಿರ್ಣಯಕ್ಕೆ ಬರುವ ಬದಲು ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸುವಂತೆ ಶ್ರೀರಾಮುಲು ಸೂಚಿಸಿದರು.