ನ್ಯಾಯಾಲಯದ ಆವರಣದಲ್ಲಿಯೇ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿಯೊಬ್ಬನನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಶುಕ್ರವಾರ ನಡೆದಿದೆ. ಇದರಿಂದಾಗಿ ನಗರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದ ಸುರಪುರ ತಾಲೂಕಿನ ಯಾಳಗಿ ಗ್ರಾಮದ ರಾಜುಗೌಡ ಎಂಬಾತನನ್ನು ಪ್ರತೀಕಾರಕ್ಕಾಗಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
2006ರಲ್ಲಿ ಸುರಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ರಾಜುಗೌಡ ಹಾಗೂ ಸಂಗಡಿಗರು ಇಲ್ಲಿಯ ನ್ಯಾಯಾಲಯಕ್ಕೆ ಆಗಮಿಸಿದ್ದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದ್ದರಿಂದ ಚಹಾ ಕುಡಿಯಲು ಹೊರ ಬಂದಿದ್ದರು. ಆ ಹೊತ್ತಿಗೆ ಹೊರಗಡೆ ಕಾಯುತ್ತಿದ್ದ ಯುವಕರು ತಲೆಗೆ ಗುಂಡು ಹಾರಿಸಿ ಪರಾರಿಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೂಡಲೇ ರಾಜುಗೌಡನನ್ನು ಸಂಬಂಧಿಕರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ದಾರಿ ಮಧ್ಯೆಯೇ ರಾಜುಗೌಡ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ ಉಪವಿಭಾಗಾಧಿಕಾರಿ ಕವಿತಾ ಮನ್ನಿಕೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
2006ರಲ್ಲಿ ಸುರಪುರ ನ್ಯಾಯಾಲಯದ ಎದುರು ಸಂಜೀವ ರೆಡ್ಡಿ ಎಂಬುವರ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಯಾಳಗಿ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜುಗೌಡ ಪ್ರಥಮ ಹಾಗೂ ಆತನ ಸಹೋದರ ಶರಣಗೌಡ ಎರಡನೇ ಆರೋಪಿಯಾಗಿದ್ದರು. ಇತರ 30 ದನ ಕೊಲೆ ಆರೋಪ ಎದುರಿಸುತ್ತಿದ್ದರು.
ರೆಡ್ಡಿ ಕೊಲೆ ಪ್ರಕರಣದ ಎರಡನೇ ಆರೋಪಿ ಶರಣಗೌಡ ಎಂಬಾತನನ್ನು ಇತ್ತೀಚೆಗಷ್ಟೇ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಕೊಲೆ ಮಾಡಲಾಗಿತ್ತು. ಇದೀಗ ರಾಜುಗೌಡನನ್ನು ಕೊಲೆ ಮಾಡುವ ಮೂಲಕ ರೆಡ್ಡಿ ಬೆಂಬಲಿಗರು ಪ್ರತೀಕಾರ ತೀರಿಸಿಕೊಂಡಿದ್ದಾರೆ.