ಬಜ್ಪೆ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಕುಟುಂಬಗಳಿಗೆ ನೀಡಿರುವ ಪರಿಹಾರದಲ್ಲಿ ಕಡಿಮೆ ಸಂಬಳದ ಆಧಾರದಲ್ಲಿ ಹೆಚ್ಚು ಸಂಬಳ ಪಡೆಯುತ್ತಿದ್ದವರಿಗೆ ಅಧಿಕ ಪರಿಹಾರ ನೀಡುವ ಮೂಲಕ ತಾರತಮ್ಯ ಎಸಗಿರುವುದಾಗಿ ಕೆಲವು ಕುಟುಂಬಗಳು ಆರೋಪಿಸಿವೆ.
ವಿಮಾನ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಗರಿಷ್ಠ 160,000 ಡಾಲರ್ (76 ಲಕ್ಷ) ಪರಿಹಾರ ನೀಡಲಾಗುತ್ತದೆ. ಆದರೆ ಮಂಗಳೂರು ವಿಮಾನ ದುರಂತದಲ್ಲಿ ಆ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಕಾನೂನು ತಜ್ಞರು ಆರೋಪಿಸಿದ್ದಾರೆ. ದುರಂತದಲ್ಲಿ ಮಡಿದ ಎರಡು ಕುಟುಂಬಗಳಿಗೆ ಒಟ್ಟು 90 ಲಕ್ಷ ರೂಪಾಯಿಯನ್ನು ನೀಡಲಾಗಿದೆ. ಅದರಲ್ಲಿ ಒಬ್ಬರು ಪ್ರತಿ ತಿಂಗಳು 80 ಸಾವಿರ ಆದಾಯ ಹೊಂದಿದ್ದರೆ, ಮತ್ತೊಬ್ಬರು 1.2 ಲಕ್ಷ ಆದಾಯ ಹೊಂದಿದ್ದರು.
ಸಂಬಳದ ಆಧಾರದ ಮೇಲೆ ಪರಿಹಾರ ವಿತರಿಸುವ ಮುಖೇನ ಏರ್ ಇಂಡಿಯಾ ತಾರತಮ್ಯ ಎಸಗಿದೆ ಎಂದು ಮೃತರ ಕೆಲವು ಕುಟುಂಬಗಳು ಆರೋಪಿಸಿವೆ. ಇದರಲ್ಲಿ ಮಹಿಳೆಯರು, ಮಕ್ಕಳಿಗೂ ತಾರತಮ್ಯ ಮಾಡಲಾಗಿದೆ ಎಂದು ಅಬ್ದುಲ್ ಬಶೀರ್ ದೂರಿದ್ದಾರೆ.
ಬಶೀರ್ ಸಹೋದರ ಅಬ್ದುಲ್ ರೆಹಮಾನ್ ಅವರು ವಿಮಾನ ದುರಂತದಲ್ಲಿ ಅವರ ಪತ್ನಿ ಶಾಹೀದಾ ನುಸ್ರತ್ ಮತ್ತು ಮಗ ಜೀಶಾನ್(9) ಸಾವನ್ನಪ್ಪಿದ್ದರು. ಪರಿಹಾರ ನೀಡಿಕೆ ಕುರಿತಂತೆ ಕಳೆದ ವಾರ ಮುಂಬೈಯಲ್ಲಿ ಸಭೆ ನಡೆದಿತ್ತು. ಅಲ್ಲಿ ಮೃತ ಮಹಿಳೆಗೆ 30 ಲಕ್ಷ ಹಾಗೂ ಮಗುವಿಗೆ 25 ಲಕ್ಷ ಎಂದು ತಿಳಿಸಿದ್ದರು. ಹಾಗಾಗಿ ಇದು ತಾರತಮ್ಯ ಧೋರಣೆ ಎಂದು ಬಶೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಹಾರ ವಿತರಣೆಯಲ್ಲೂ ಬಡವ, ಶ್ರೀಮಂತ ಎಂಬ ಪಕ್ಷಪಾತ ಯಾಕೆ ಎಂದು ಬಶೀರ್ ಪ್ರಶ್ನಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರೆಲ್ಲರೂ ಟಿಕೆಟ್ ಹಣವನ್ನು ಒಂದೇ ತೆರನಾಗಿ ಪಾವತಿಸಿದ್ದಾರಲ್ಲ? ಬಡವರು ಟಿಕೆಟ್‌ಗೆ ಕಡಿಮೆ ಹಣ ಕೊಟ್ಟಿದ್ದಾರೆಯೇ ಪ್ರಶ್ನಿಸಿರುವ ಅವರು, ಲಗೇಜ್‌ಗಳಿಗೂ ಕೂಡ ಎಲ್ಲರೂ 70 ಸಾವಿರ ರೂಪಾಯಿ ಪಾವತಿಸಿದ್ದಾರೆ. ಹಾಗಿದ್ದ ಮೇಲೆ ಲಗೇಜ್ ಪರಿಹಾರ ವಿತರಣೆಯಲ್ಲೂ ಸಮನಾಗಿ ಹಂಚಬೇಕಲ್ಲ. ಹಲವು ಪ್ರಯಾಣಿಕರ ಲಗೇಜ್ ಕೂಡ ನಾಶವಾಗಿದೆ. ಆದರೆ ಇದರಲ್ಲೂ ಅನ್ಯಾಯವಾಗಿದೆ. ಆ ನಿಟ್ಟಿನಲ್ಲಿ ತಾವು ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಈ ತಾರತಮ್ಯ ನೀತಿಯ ಬಗ್ಗೆ ಏರ್ ಇಂಡಿಯಾದ ಜನರಲ್ ಮ್ಯಾನೇಜರ್ ಹರ್‌ಪ್ರೀತ್ ಸಿಂಗ್ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಪರಿಹಾರ ವಿತರಣೆ ಸಭೆಯಲ್ಲಿ ಕಾನೂನ ತಜ್ಞರು ಸೂಕ್ತವಾದ ಉತ್ತರ ನೀಡಿದ್ದಾರೆ. ನಿಜಕ್ಕೂ ಈ ರೀತಿಯ ಅಂತರದ ಬಗ್ಗೆ ನನಗೆ ಅಚ್ಚರಿಯಾಗಿದೆ. ಪರಿಹಾರ ವಿತರಣೆ ಕುರಿತಂತೆ ಇನ್ಸೂರೆನ್ಸ್ ಸಂಸ್ಥೆಯ ಜೊತೆ ಕಾನೂನು ತಜ್ಞರು ಮಾತುಕತೆ ನಡೆಸುತ್ತಿರುವುದಾಗಿ ವಿವರಿಸಿದ್ದಾರೆ.
ಆದರೆ ವಿಮಾನ ದುರಂತದಲ್ಲಿನ ಪರಿಹಾರ ವಿಚರಣೆಯ ಆಫರ್ ಅನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವುದಾಗಿ ಮೃತ ಕುಟುಂಬಗಳ ಸದಸ್ಯರ ಸಂಘಟನೆ ತಿಳಿಸಿದೆ. ನಂತರ ತಾರತಮ್ಯ ನೀತಿಯ ಪರಿಹಾರವನ್ನು ಸ್ವೀಕರಿಸಬೇಕೆ ಅಥವಾ ಕಾನೂನು ಮೊರೆ ಹೋಗಬೇಕೆ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದೆ.