ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಆದಿ ಜನಾಂಗವನ್ನು 2(ಎ) ವರ್ಗಕ್ಕೆ ಸೇರಿಸುವುದಾಗಿ ಭರವಸೆ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬೀದರ್ ಸಂಸದ ಎನ್.ಧರಂಸಿಂಗ್ ಆಪಾದಿಸಿದರು.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರ ಮತ್ತು ಕಡೂರು ಮತ ಕ್ಷೇತ್ರಗಳಲ್ಲಿ 13ರಂದು ಮರು ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಆದಿ ಸಮಾಜದ ಮತ ಸೆಳೆಯುವ ತಂತ್ರಗಾರಿಕೆ ಮಾಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಕಾಂಗ್ರೆಸ್ ಪಕ್ಷದ ನಿರ್ಧರಿಸಿದೆ ಎಂದರು.
ಚಂದ್ರಶೇಖರ ಪಾಟೀಲ್ ರೇವೂರ ನಿಧನದಿಂದ ತೆರವಾದ ಗುಲ್ಬರ್ಗ ದಕ್ಷಿಣ ಮತಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ರೇವೂರ ಕುಟುಂಬದ ಸದಸ್ಯರಿಗೆ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ಆ ಕುಟುಂಬದ ಸದಸ್ಯರನ್ನು ಜೆಡಿಎಸ್ ಸೆಳೆದು ಟಿಕೆಟ್ ನೀಡಿದೆ. ಬಿಜೆಪಿಯಲ್ಲಿ ಒಡಕು ಉಂಟಾಗಿದೆ ಎಂದರು.
ಜೆಡಿಎಸ್ ಮುಖಂಡರು, ಕಾರ್ಯಕರ್ತರ ಕೊರತೆ ಇದೆ. ಹೀಗಾಗಿ ಆ ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರೇವೂರ ಪತ್ನಿ ಅರುಣಾ ಪಾಟೀಲರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಒಳ ಜಗಳದ ಲಾಭ ಪಡೆಯಲು ಹೊರಟಿದ್ದಾರೆ. ಬಿಜೆಪಿ-ಜೆಡಿಎಸ್‌ನ ಗೊಂದಲ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಯಾವುದೇ ಅಭಿವೃದ್ದಿ ಕೆಲಸ ಆಗಿಲ್ಲ. ನೆರೆ ಸಂತ್ರಸ್ತರ ಆಸರೆ ಮನೆಗಳು ಪೂರ್ಣಗೊಂಡಿಲ್ಲ. ಗುಲ್ಬರ್ಗದಲ್ಲಿ ಎರಡು ಬಾರಿ ಸಚಿವ ಸಂಪುಟ ಸಭೆ ನಡೆಸಿದರೂ ಲಾಭವಾಗಿಲ್ಲ ಎಂದು ದೂರಿದರು.