ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲ್ಲುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಬಿಜೆಪಿ ಮುಖಂಡ, ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ತನ್ನದೇ ಆದ ಸಿದ್ದಾಂತ, ಕಾರ್ಯಕರ್ತರ ಪಡೆ ಇದೆ. ಮುಖಂಡರಿದ್ದಾರೆ. ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಸಂಸದರು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ದಿ.ಚಂದ್ರಶೇಖರ ಪಾಟೀಲ್ ರೇವೂರ ಪುತ್ರ ದತ್ತಾತ್ರೇಯ ಪಾಟೀಲ್ ಅವರು ಜೆಡಿಎಸ್ ಸೇರ್ಪಡೆಯಾಗಬಾರದಿತ್ತು. ವಾಪಸ್ ಬಿಜೆಪಿಗೆ ಬರಬೇಕು. ಅಪ್ಪೂಗೌಡ(ದತ್ತಾತ್ರೇಯ ಪಾಟೀಲ್) ಇನ್ನೂ ಯುವಕರಿದ್ದು, ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಜೆಡಿಎಸ್‌ನಲ್ಲಿ ಭವಿಷ್ಯ ಇಲ್ಲ ಎಂದರು.
ಶಶೀಲ್ ನಮೋಶಿ ಏನೆಲ್ಲಾ ಅಧಿಕಾರ ಹೊಂದಿದ್ದರೂ ಈ ಭಾಗದಲ್ಲಿ ಬಿಜೆಪಿ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ವರಿಷ್ಠರು ಅವರಿಗೆ ಟಿಕೆಟ್ ನೀಡಿದ್ದಾರೆ. ಪಕ್ಷದಲ್ಲಿ ಶಿಸ್ತಿನ ಸಿಪಾಯಿಗಳಾಗಿ ನಾವು ಕೆಲಸ ಮಾಡಬೇಕಿದೆ. ಬಿಜೆಪಿ ತನ್ನ ಸ್ಥಾನ ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಆಡಳಿತ ಪಕ್ಷದ ಸಾಧನೆ ಮಾನದಂಡವಾಗಿಟ್ಟುಕೊಂಡು, ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಪಾವಧಿಯಲ್ಲಿ ಜನರಿಗೆ ನೀಡಿರುವ ನಾನಾ ಯೋಜನೆಗಳು, ಅಭಿವೃದ್ಧಿ ಕೆಲಸಗಳು ಈ ಚುನಾವಣೆಯಲ್ಲಿ ಗಣನೆಗೆ ಬರಲಿವೆ. ಟಿಕೆಟ್ ನೀಡಿಕೆಗೆ ಸಂಬಂಧಿಸಿದಂತೆ ಎದ್ದಿರುವ ಕಿರಿಕಿರಿ ತಾತ್ಕಾಲಿಕ. ಇದು ತಾನೇ ತಾನಾಗಿ ಶಮನವಾಗಿ ಹೋಗಲಿದೆ. ಬಿಜೆಪಿ ಯಾವುದೇ ಕಾರಣಕ್ಕೂ ಬಲಹೀನವಾಗೋದಿಲ್ಲ ಎಂದರು.