ರಾಜ್ಯದ ನೆರೆ ಪೀಡಿತ ಸಂತ್ರಸ್ತರಿಗೆ 'ಆಸರೆ' ಯೋಜನೆಯಡಿ 60,000 ಮನೆಗಳ ನಿರ್ಮಾಣ ಮುಂದಿನ ಫೆಬ್ರುವರಿಯೊಳಗೆ ಪೂರ್ಣಗೊಳ್ಳಲಿದ್ದು, ಪ್ರಧಾನಮಂತ್ರಿಗೆ ಹೆಚ್ಚಿನ ನೆರವಿಗೆ ಪುನಃ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ತಾಲೂಕಿನ ಎನ್.ಮಲ್ಕಾಪುರದಲ್ಲಿ 'ಆಸರೆ' ಬಡಾವಣೆ ಉದ್ಘಾಟಿಸಿದ ನಂತರ ಜರುಗಿದ ಸಮಾರಂಭದಲ್ಲಿ ಸಂತ್ರಸ್ತರಿಗೆ ಮನೆಗಳ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಹಳ್ಳಿಗರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವುದು ಸರಕಾರದ ಸಂಕಲ್ಪ. ಸಾಧನೆಗಳೇ ಮಾತಾಡಬೇಕು, ಮಾತುಗಳೇ ಸಾಧನೆಯಾಗಬಾರದು ಎನ್ನುವುದು ನಮ್ಮ ಆಶಯ ಎಂದರು.
ಹಿಂದಿನ ಸರಕಾರಗಳು ಅಧಿಕಾರದಲ್ಲಿದ್ದಾಗ ನೆರೆ ಹಾವಳಿ ಸಂಭವಿಸಿದ್ದು, ಯಾರೊಬ್ಬರು ಶಾಶ್ವತ ಪುನರ್ವಸತಿಗೆ ಯೋಚಿಸಿ ಕಾರ್ಯರೂಪಕ್ಕೆ ತರಲಿಲ್ಲ.'ಆಸರೆ' ಮನೆಗಳು ಚಿಕ್ಕದಾಗಿವೆ ಎಂಬ ಸಂತ್ರಸ್ತರ ಭಾವನೆ ಅರ್ಥವಾಗಿದೆ. ಈ ಮನೆಗಳ ವಿಸ್ತರಣೆಗೆ ಅನುಕೂಲಕರ ನಿವೇಶನ ಕೊಟ್ಟಿದ್ದು, ಸಂತ್ರಸ್ತರು 25,000 ರೂ. ಹೂಡಿದರೆ ಸರಕಾರ ಅಷ್ಟೇ ಮೊತ್ತ ಭರಿಸಿ ವಿಸ್ತಾರವಾದ ಮನೆ ಕಟ್ಟಿಕೊಳ್ಳಲು ನೆರವಾಗಲಿದೆ ಎಂದರು.
ಸಂತ್ರಸ್ತರ 60,000 ಮನೆಗಳ ವಿಸ್ತರಣೆ ಯೋಜನೆಗೆ ಬೇಕಾಗಿರುವ 150 ಕೋಟಿ ರೂ. ಮುಂದಿನ ಬಜೆಟ್‌ನಲ್ಲಿ ಕಾದಿರಿಸಲಾಗುವುದು. ಬಡವರ ಮನೆ ನಿರ್ಮಾಣಕ್ಕೆ ಹಣಕಾಸಿನ ಮುಗ್ಗಟ್ಟಿಲ್ಲ. ಪ್ರಾಮಾಣಿಕ ಕೈಗಳ ಕೊರತೆಯಿಂದ ಜನರಿಗೆ ಕಷ್ಟ-ನಷ್ಟಗಳು ಎದುರಾಗಿವೆ. ಉತ್ತಮ ಶಿಕ್ಷಣ, ಆರೋಗ್ಯ, ಸವಲತ್ತು ಕಲ್ಪಿಸಲಿದ್ದು, ಹಳ್ಳಿಗರು ವಲಸೆ ಬಿಟ್ಟು ಸ್ವಂತ ಊರಿನಲ್ಲಿ ದುಡಿದು ಸ್ವಾಭಿಮಾನದಿಂದ ಬದುಕಬೇಕು. ಮುಂದಿನ ತಿಂಗಳಿಂದ ಭಾಗ್ಯಲಕ್ಷ್ಮಿ ಫಲಾನುಭವಿಗಳ ಜಿಲ್ಲಾವಾರು ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಆರೋಗ್ಯ ತಪಾಸಣೆ ನಡೆಸಿ ಹೆಲ್ತ್ ಕಾರ್ಡ್ ಹಾಗೂ ತಾಯಂದಿರಿಗೆ ಸೀರೆ ಉಡುಗೊರೆ ನೀಡಲಾಗುವುದು ಎಂದು ತಿಳಿಸಿದರು.