ನಿಷೇಧ ಇದ್ದರೂ ಅಕ್ರಮವಾಗಿ ಅದಿರು ರಫ್ತಾಗುತ್ತಿದೆ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಗಂಭೀರವಾಗಿ ಆರೋಪಿಸಿದ್ದು, ಉಕ್ಕು ಕಾರ್ಖಾನೆಗಳಿಗೆ ಅದಿರು ಸಾಗಣೆಗೆ ನೀಡಿರುವ ವಿನಾಯಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಗಣಿಧಣಿಗಳು ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಬಂದರಿನ ಮೂಲಕ ವಿದೇಶಕ್ಕೆ ಅದಿರು ರಫ್ತು ಮಾಡುತ್ತಿದ್ದಾರೆ ಎಂದು ದೂರಿದರು.
ನಗರದಲ್ಲಿ ನಡೆದ 'ಅಂದೋಲನ ಕಪ್' ಹಾಕಿ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಅದಿರು ರಫ್ತು ನಿಷೇಧಿಸಿರುವುದರಿಂದ ರಫ್ತು ಪ್ರಮಾಣ ಕಡಿಮೆಯಾಗಿದೆ. ಆದರೆ ಉಕ್ಕು ಕಾರ್ಖಾನೆಗಳಿಗೆ ಅದಿರು ಸಾಗಣೆ ಮಾಡಲು ಅವಕಾಶ ಮಾಡಿಕೊಟ್ಟಿರುವುದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕುರಿತು ಮಾಹಿತಿ ಬಂದಿದೆ. ಆಂಧ್ರಪ್ರದೇಶದ ಮೂರು ಹಾಗೂ ತಮಿಳುನಾಡಿನ ಒಂದು ಬಂದರಿನ ಮೂಲಕ ಅದಿರು ಅಕ್ರಮವಾಗಿ ರಫ್ತಾಗುತ್ತಿರುವ ಕುರಿತು ತಮ್ಮ ಬಳಿ ಮಾಹಿತಿ ಇದೆ ಎಂದರು ತಿಳಿಸಿದರು.
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ತನಿಖೆ ಪ್ರಗತಿಯಲ್ಲಿದೆ. ಜತೆಗೆ ಸಿಐಡಿ ಕೂಡ ತನಿಖೆ ನಡೆಸುತ್ತಿದ್ದು, ಎರಡು ತನಿಖೆಗಳು ಪ್ರತ್ಯೇಕವಾಗಿ ನಡೆಯುತ್ತಿದೆ ಎಂದ ಅವರು, ಅಗತ್ಯ ಬಿದ್ದಾಗ ಸಿಬಿಐ ಸಲಹೆ-ಸಹಕಾರವನ್ನು ಕೋರಲಾಗುವುದು ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ಪ್ರಕರಣ ವಿವಿಧ ರಾಜ್ಯಗಳಿಗೆ ಸಂಬಂಧಿಸಿರುವುದರಿಂದ ಇತರೆ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಸಂಪರ್ಕಿಸುವ ಅಧಿಕಾರವನ್ನು ರಾಜ್ಯ ಸರಕಾರ ತಮಗೆ ನೀಡಿದೆ. ಇದನ್ನು ಬಳಸಿಕೊಂಡು ತನಿಖೆ ತೀವ್ರಗೊಳಿಸಲಾಗುವುದು ಎಂದರು.