ಸರಕಾರಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯ ರದ್ದು ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಉದ್ಯೋಗ ವಂಚಿತರು ಪ್ರಾರಂಭಿಸಿರುವ ಅಹೋರಾತ್ರಿ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸರಕಾರ ಹೊರಡಿಸಿರುವ ಆದೇಶ ಹಿಂಪಡೆಯದಿದ್ದಲ್ಲಿ ತಾವು ಆತ್ಮಹತ್ಯೆಗೆ ಸಿದ್ದ ಎಂದು ಬೆದರಿಕೆ ಹಾಕಿರುವ ವಜಾಗೊಂಡಿರುವ ಸಿಬ್ಬಂದಿ ವರ್ಗ ಇನ್ನೆರಡು ದಿನಗಳಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸರಕಾರದ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದರೂ ಸಹ ಯಾವುದೇ ಬೆಳವಣಿಗೆಯ ಬಗ್ಗೆ ಮಾಹಿತಿ ಪ್ರತಿಭಟನಾಕಾರರಿಗೆ ಸಿಕ್ಕಿಲ್ಲ. ಆ ನಿಟ್ಟಿನಲ್ಲಿ ಸೋಮವಾರ ಅಥವಾ ಮಂಗಳವಾರ ತಡೆಯಾಜ್ಞೆ ಸಿಗಬಹುದು ಎಂಬ ವಿಶ್ವಾಸ ಪ್ರತಿಭಟನಾಕಾರರದ್ದು.
ಏತನ್ಮಧ್ಯೆ ಪ್ರತಿಭಟನಾಕಾರರು ವಿಷದ ಬಾಟಲಿ, ಸೀಮೆಎಣ್ಣೆ ಡಬ್ಬಗಳನ್ನು ಇಟ್ಟುಕೊಂಡಿರುವುದನ್ನು ಪತ್ತೆ ಹಚ್ಚಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಯಾವುದೇ ಸಂದರ್ಭ ಎದುರಾದಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸ್ಥಳದಲ್ಲಿ ಅಂಬುಲೆನ್ಸ್‌ಗಳನ್ನು ಇಟ್ಟುಕೊಂಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.