ಗಣಿ ದಾಳಿಯಲ್ಲಿ ಸಚಿವ ಜನಾರ್ಧನ ರೆಡ್ಡಿ ಕೈವಾಡ:ಅನಿಲ್ ಲಾಡ್
ಬೆಂಗಳೂರು, ಸೋಮವಾರ, 30 ಆಗಸ್ಟ್ 2010( 10:12 IST )
ಗಣಿ ಕಂಪೆನಿಯ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತವಾಗಿದ್ದು, ದಾಳಿಯ ಹಿಂದೆ ಬಳ್ಳಾರಿ ಉಸ್ತುವಾರಿ ಸಚಿವ ಜನಾರ್ಧನ ರೆಡ್ಡಿಯವರ ಕೈವಾಡವಿದೆ ಎಂದು ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಯ ಯಶಸ್ವಿನಿಂದ ಮಾನಸಿಕ ಸಮತೋಲನ ಕಳೆದುಕೊಂಡ ರೆಡ್ಡಿ ಸಹೋದರರು, ರಾಜಕೀಯ ಪ್ರಭಾವ ಬಳಿಸಿ ಅರಣ್ಯ ಅಧಿಕಾರಿಗಳನ್ನು ದಾಳಿಗೆ ಪ್ರಚೋದಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದು, ಇವತ್ತಿನವರೆಗೆ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿಲ್ಲ. ಆದರೆ ಕೇವಲ ಐದು ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿದ ರೆಡ್ಡಿ ಸಹೋದರರು, ಅಕ್ರಮ ಗಣಿಗಾರಿಕೆಯನ್ನು ತಮ್ಮ ವೃತ್ತಿಯಾಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಲಾಡ್ ಗಣಿಯ ಮೇಲೆ ನಡೆಸಿದ ದಾಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಅಸಮಧಾನ ವ್ಯಕ್ತಪಡಿಸಿ,ಲಾಡ್ ಸಹೋದರರು ಅಕ್ರಮ ಗಣಿಗಾರಿಕೆಯನ್ನು ನಡೆಸಿದಲ್ಲಿ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ರಾಜಕೀಯ ಸೇಡು ತೀರಿಸಿಕೊಂಡಲ್ಲಿ ಅಧಿಕಾರ ಶಾಶ್ವತವಲ್ಲ ಎನ್ನುವುದು ನೆನಪಿರಲಿ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.