ಗೋ ಹತ್ಯೆ ನಿಷೇಧ-ರಾಜ್ಯಪಾಲರ ಮೇಲೆ ಒತ್ತಡ ಹೇರಿಲ್ಲ: ಆಚಾರ್ಯ
ಮಂಗಳೂರು, ಸೋಮವಾರ, 30 ಆಗಸ್ಟ್ 2010( 11:39 IST )
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಜಾರಿಗೊಳಿಸುವ ನಿಟ್ಟಿನಲ್ಲಿ ಮಸೂದೆಗೆ ಅಂಕಿತ ಹಾಕುವಂತೆ ರಾಜ್ಯಪಾಲರ ಮೇಲೆ ಸರಕಾರ ಒತ್ತಡ ಹೇರಿಲ್ಲ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕುರಿತಂತೆ ರಾಜ್ಯ ಸರಕಾರ ಒತ್ತಡದ ತಂತ್ರ ಅನುಸರಿಸುತ್ತಿದೆ ಎಂಬ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರ ಆರೋಪವನ್ನು ತಳ್ಳಿಹಾಕಿದರು.
ರೈತರ ಮತ್ತು ಹಿಂದೂಗಳ ಹಿತದೃಷ್ಟಿಯಿಂದ ವಿಧೇಯಕದ ವಾಸ್ತವ ಸ್ಥಿತಿ ಕುರಿತು ವಿವರಿಸುವ ನಿಟ್ಟಿನಲ್ಲಿ ಬಿಜೆಪಿ ರಾಲಿಯನ್ನು ಹಮ್ಮಿಕೊಂಡಿದೆ. ಈ ಮೂಲಕವಾದರೂ ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳಲಿದೆ ಎಂಬ ನಿಲುವು ಪಕ್ಷದ್ದಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಜಾರಿಯಾಗಬಾರದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ರೈತ, ಪ್ರಗತಿಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಆ ಹಿನ್ನೆಲೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಕಿತ ಹಾಕಬಾರದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ರಾಷ್ಟ್ರಪತಿಗಳನ್ನು ಭೇಟಿಯಾಗಿ ಒತ್ತಾಯಿಸಿದ್ದರು.