ಸನ್ನಡತೆಯುಳ್ಳ 594 ಕೈದಿಗಳ ಬಿಡುಗಡೆ ರಾಜ್ಯಪಾಲರು ಮೀನಮೇಷ ಎಣಿಸುತ್ತಿದ್ದು, ಈಗಾಗಲೇ ಎರಡು ಸಲ ಮನವಿ ಮಾಡಿಕೊಳ್ಳಲಾಗಿದೆ. ಮೂರನೇ ಮನವಿಗೂ ರಾಜ್ಯಪಾಲರು ಒಪ್ಪದಿದ್ದರೆ ರಾಷ್ಟ್ರಪತಿಗೆ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಬಂದಿಖಾನೆ ಹಾಗೂ ತೋಟಗಾರಿಕೆ ಖಾತೆ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಆಂಧ್ರದ ನಂದ್ಯಾಲ್‌ಗೆ ಹೋಗುವ ಮಾರ್ಗ ಮಧ್ಯೆ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ತಂಗಿದ್ದಾಗ ಸುದ್ದಿಗಾರರ ಜತೆ ಮಾತನಾಡಿದರು.
ಸನ್ನಡತೆಯುಳ್ಳ ಕೈದಿಗಳ ಪಟ್ಟಿಯಲ್ಲಿ ಕರ್ನಾಟಕವಲ್ಲದೇ ನೆರೆಯ ರಾಜ್ಯಗಳ ಕೈದಿಗಳು ಸೇರಿದ್ದಾರೆ. ಸನ್ನಡತೆಯುಳ್ಳ ಕೈದಿಗಳ ಬಿಡುಗಡೆ ಹಿಂದಿನಿಂದ ಜಾರಿಯಲ್ಲಿದ್ದು, ಈ ಬಾರಿ ರಾಜ್ಯಪಾಲರು ಅದೇಕೆ ಹಿಂಜರಿಯುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಒಂದೊಂದು ಬಾರಿ ಒಂದೊಂದು ಸಲ ಮಾಹಿತಿ ಕೇಳುತ್ತಿದ್ದು, ಹೇಳಿದ್ದನ್ನೆಲ್ಲ ಸರಕಾರ ಪಾಲಿಸಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸನ್ನಡತೆಯುಳ್ಳ ಕೈದಿಗಳ ಬಿಡುಗಡೆಯಾಗಬೇಕಾಗಿದ್ದು, ಮಾನವೀಯತೆ ದೃಷ್ಟಿಯಿಂದಲಾದರೂ ರಾಜ್ಯಪಾಲರು ಅಂಕಿತ ಹಾಕಬೇಕಾಗಿದೆ ಎಂದರು.
ತೋಟಗಾರಿಕೆ ಇಲಾಖೆಗೆ ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಲ್ಲಿ 400 ಕೋಟಿ ರೂ. ನೆರವು ನೀಡಿದೆ. ನಾನಾ ಯೋಜನೆಗಳು, ಸಾಕಷ್ಟು ಅನುದಾನವಿದ್ದರೂ ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಅನುಷ್ಠಾನ, ಬಳಕೆ ಸಾಧ್ಯವಾಗುತ್ತಿಲ್ಲ ಎಂದು ಉಮೇಶ ಕತ್ತಿ ವಿಷಾದಿಸಿದರು.