ಸಚಿವರನ್ನು ಕೈ ಬಿಡುವುದು, ಸೇರ್ಪಡೆಗೊಳಿಸುವುದು ವರಿಷ್ಠರಿಗೆ ಬಿಟ್ಟ ವಿಷಯ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ವರು ಸಚಿವರನ್ನು ಕೈ ಬಿಡುವ ವಿಷಯ ಪತ್ರಿಕೆಯಲ್ಲಿ ಓದಿದ ನಂತರವೇ ಗೊತ್ತಾಗಿದ್ದು, ಸಂಪುಟ ಪುನಾರಚನೆಯ ಬಗ್ಗೆ ಪಕ್ಷದ ವರಿಷ್ಠರು ಯಾವುದೇ ಸುಳಿವು ನೀಡಿಲ್ಲ. ರಾಜ್ಯಭಾರದ ಬಗ್ಗೆ ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯರು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದರು.
ಶೋಭಾ ಕರಂದಾಜ್ಲೆ ಸಂಪುಟ ಸೇರ್ಪಡೆಗೆ ತಮ್ಮದೇನು ಅಭ್ಯಂತರವಿಲ್ಲ. ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಯಾರ ಮೇಲೂ ಒತ್ತಡ ಹೇರಲಿಲ್ಲ. ಸಿಎಂ ಮತ್ತು ಪಕ್ಷದ ವರಿಷ್ಠರು ಯಾವುದೇ ನಿರ್ಧಾರ ತೆಗೆದುಕೊಂಡರೂ ರಾಜ್ಯದ ಹಿತಾಸಕ್ತಿ ಅಡಗಿರುತ್ತದೆ ಎಂದರು.
ಸಿಎಂ ಯಡಿಯೂರಪ್ಪ ಸಮರ್ಥ ಹಾಗೂ ಯಶಸ್ವಿ ಆಡಳಿತಗಾರರಾಗಿದ್ದಾರೆ. ಜನಪರ ಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡುತ್ತಿರುವಾಗ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಗೊಂದಲ ಬೇಡ. ಉಪ ಮುಖ್ಯಮಂತ್ರಿ ಹುದ್ದೆ ಬೇಕೆಂಬ ಅಭಿಪ್ರಾಯ ರೆಡ್ಡಿ ಸಹೋದರರು ವ್ಯಕ್ತಪಡಿಸಿಲ್ಲ. ಸಿಎಂ ನೇತೃತ್ವದ ರಾಜ್ಯ ಸರಕಾರ ಜನಪರವಾಗಿದ್ದು, ಪ್ರತಿಪಕ್ಷಗಳ ಟೀಕೆಗೆ ದಿಟ್ಟ ಆಡಳಿತದ ಮೂಲಕ ಉತ್ತರ ನೀಡಲಾಗುವುದು. ವದಂತಿಗೆ ಜನತೆ ಕಿವಿಗೊಡುವ ಅಗತ್ಯವಿಲ್ಲ ಎಂದರು.