ಪರಿಸರ ಮಾಲಿನ್ಯ ತಡೆಗಟ್ಟಲು ಗ್ರೀನ್ ಬ್ರಿಗೇಡ್ ಸ್ಥಾಪನೆಗೆ ರಾಜ್ಯ ಸರಕಾರ ಮುಂದಾಗಿದ್ದು, ಮುಂದಿನ ಒಂದು ತಿಂಗಳ ಒಳಗಾಗಿ ಗ್ರೀನ್ ಪೊಲೀಸ್ ನೇಮಕ ಮಾಡಲಾಗುವುದು ಎಂದು ಬಂದರು, ಪರಿಸರ ಖಾತೆ ಸಚಿವ ಕೃಷ್ಣ ಜೆ.ಪಾಲೆಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು 'ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವಾಗಿಸಲು ಸರಕಾರ ಉದ್ದೇಶಿಸಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಂಚಾಯತ್ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆಯನ್ನು ಭಾನುವಾರ ನಡೆಸಲಾಗಿದೆ. ಸಮೀಕ್ಷೆಯ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗುವುದೆಂದು ಹೇಳಿದರು.
ಭಾರೀ ಮಳೆಯಿಂದಾಗಿ ಜಿಲ್ಲೆಯ ರಸ್ತೆಗಳಿಗೆ ಅಪಾರ ಹಾನಿಯಾಗಿದ್ದು, ದುರಸ್ತಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದ ಸಭೆ ನಡೆಸಿ ಚರ್ಚಿಸಲಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಯಮದಡಿ ಹೆಚ್ಚಿನ ಅನುದಾನ ಒದಗಿಸಲು, ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು.