ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬೂದಿಹಳ್ಳಿಯ ಜಾತಿ ವೈಷಮ್ಯಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕರುಣಾಕರ ರೆಡ್ಡಿ ಮನವಿ ಮಾಡಿದರು.
ಪಟ್ಟಣದ ವೆಂಕಟೇಶ್ವರ ನಗರದ ಗುಡಿಸಲುಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ಬೂದಿಹಳ್ಳಿಯ ದಲಿತ ಕುಟುಂಬಗಳನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಅಧಿಕಾರಿಗಳು ಕಾನೂನು ಪ್ರಕಾರವೇ ಕೆಲಸ ಮಾಡುತ್ತಾರೆ. ಇವರ ಶಿಫಾರಸಿನ ಆಧಾರದಲ್ಲೇ ನಿಮಗೆ ಸೌಲಭ್ಯ ನೀಡಲು 63 ಲಕ್ಷ ರೂ. ಸರಕಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಗಲಾಟೆ ನಡೆದು 9 ತಿಂಗಳು ಕಳೆದರೂ ಭೂಮಿ ಹಾಗೂ ಪುನರ್ವಸತಿ ಕಲ್ಪಿಸುವ ಕಾರ್ಯವಾಗಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, 20 ಕುಟುಂಬಗಳಿಗೆ ಸೈಟ್ ಮಂಜೂರಾಗಿದ್ದು, ಯಾರೂ ಪಡೆದುಕೊಂಡಿಲ್ಲ ಎಂದು ಉತ್ತರಿಸಿದರು.
ಸಂತ್ರಸ್ತರಿಗೆ ನೀಡುವ ಭೂಮಿಯ ಕುರಿತು ಅಸಿಸ್ಟೆಂಟ್ ಕಮೀಷನರ್ ಹಾಗೂ ತಹಸೀಲ್ದಾರ್ ಸರ್ವೆ ಮಾಡಿ ಒಂದು ವರದಿ ತಯಾರಿಸುವಂತೆ ಸೂಚಿಸಿದ ಸಚಿವರು, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರ ಜತೆ ಚರ್ಚಿಸುವುದಾಗಿ ತಿಳಿಸಿದರು.