ಕರ್ನಾಟಕದ ಜೀವನದಿ ಎನಿಸಿರುವ ಕಾವೇರಿ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ನೈಋತ್ಯ ಮಾರುತಗಳ ಸತತ ವೈಫಲ್ಯದಿಂದಾಗಿ ನೆರೆಯ ತಮಿಳುನಾಡಿಗೆ ಕೇಳಿದಷ್ಟು ನೀರು ಪೂರೈಸಲು ಅಸಾಧ್ಯವಾದ ಪರಿಸ್ಥಿತಿ ಇದೆ. ಆದ್ದರಿಂದ ತಮಿಳುನಾಡು ನೀರಿನ ವಿಚಾರದಲ್ಲಿ ರಾಜ್ಯದೊಂದಿಗೆ ತಗಾದೆ ತೆಗೆಯದಂತೆ ಕೇಂದ್ರ ಸರಕಾರ ಬುದ್ದಿ ಹೇಳಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಡಿ.ವಿ. ಸದಾನಂದ ಗೌಡ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾವೇರಿ ಜಲ ವಿವಾದದ ಕುರಿತು ಮಾತನಾಡಿದ ಡಿ. ವಿ. ಸದಾನಂದ ಗೌಡರು ಕಾವೇರಿ ಕೊಳ್ಳ ಪ್ರದೇಶದಲ್ಲಿ 2010ರ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಅನುಕ್ರಮವಾಗಿ ಸಾಮಾನ್ಯ ಸರಾಸರಿಯ ಕೇವಲ ಶೇ.41, 54 ಮತ್ತು 56 ಪ್ರತಿಶತಗಳಷ್ಟು ಮಾತ್ರ ಮಳೆಯಾಗಿದೆ.
ಕರ್ನಾಟಕವು ಪ್ರಸಕ್ತ ಸಾಲಿನಲ್ಲಿ ತನ್ನಲ್ಲಿರುವ ಜಲಾಶಯಗಳಿಂದ ಈಗಾಗಲೇ 22 ಟಿಎಂಸಿ ನೀರನ್ನು ಬಳಸಿಕೊಂಡಿದ್ದು ತಮಿಳುನಾಡಿಗೆ 30 ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ. ಸೆಪ್ಟಂಬರ್- ಅಕ್ಟೋಬರ್ ತಿಂಗಳುಗಳಲ್ಲಿ ಸಾಕಷ್ಟು ಮಳೆಯಾದಲ್ಲಿ ಕರ್ನಾಟಕ ಖಂಡಿತವಾಗಿಯೂ ತಮಿಳುನಾಡಿಗೆ ಇನ್ನಷ್ಟು ನೀರು ಬಿಡುಗಡೆ ಮಾಡಲಿದೆ ಎಂದರು.
ಆಗಸ್ಟ್ 24ರಂದು ಜರುಗಿದ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿಯವರ ನೇತೃತ್ವದ ಉಸ್ತುವಾರಿ ಸಮಿತಿ ಸಭೆಯಲ್ಲಿ ತಮಿಳುನಾಡಿನ ಅಧಿಕಾರಿಗಳು ಹೆಚ್ಚಿನ ನೀರು ಬಿಡುಗಡೆಗೆ ಕರ್ನಾಟಕದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ.
ಆದ್ದರಿಂದ ಮುಂಗಾರು ವೈಫಲ್ಯದ ಈ ಸಂಕಷ್ಟದ ಸಮಯದಲ್ಲಿ ನೀರಿಗಾಗಿ ಜಗಳ ಮಾಡದೆ ಸಂಯಮ ವಹಿಸಲು ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡುವಂತೆ ಸಂಸದ ಸದಾನಂದ ಗೌಡರು ಪ್ರಧಾನಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಒತ್ತಾಯಿಸಿದರು.