ಕೆಲವು ಕಾಣದ ಕೈಗಳು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಹುನ್ನಾರ ಹೂಡಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿವೆ ಎಂದು ಗ್ರಂಥಾಲಯ ಮತ್ತು ಲೋಕಶಿಕ್ಷಣ ಖಾತೆ ಸಚಿವ ಕೆ.ಶಿವನಗೌಡ ನಾಯಕ ಆರೋಪಿಸಿದ್ದಾರೆ.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹೇಳಿದರು. ಉಪ ಮುಖ್ಯಮಂತ್ರಿ ಹುದ್ದೆ ವಿಷಯದಲ್ಲಿ ಪಕ್ಷದ ವರಿಷ್ಠರ ಸಹಮತವಿಲ್ಲ, ಇಂತಹ ಪ್ರಯತ್ನ ನಾನು ಕೂಡ ಬಲವಾಗಿ ವಿರೋಧಿಸುವೆ ಎಂದರು.
ಕಾಣದ ಕೈಗಳು ಯಾವುವು ಎನ್ನುವುದು ನಿರ್ದಿಷ್ಟವಾಗಿ ಹೇಳಲಾಗದು. ಆದರೆ ತೆರೆಮರೆಯಲ್ಲಿ ಅಂತಹ ಚಟುವಟಿಕೆಗಳು ನಡೆದಿದ್ದು, ಜನಾದೇಶ ಹಾಗೂ ಪಕ್ಷದ ವರಿಷ್ಠರ ಅಪೇಕ್ಷೆಯಂತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ದಿನಕ್ಕೆ 18 ತಾಸು ದುಡಿಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥ ನಾಯಕರಾಗಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿರುವಾಗ ಕಾಣದ ಕೈಗಳ ಪಿತೂರಿ ಫಲಿಸಲು ಬಿಡುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಗೆ ಓಲೈಸಿ ಮಂತ್ರಿ ಪದವಿ ಉಳಿಸಿಕೊಳ್ಳಲು ಈ ಮಾತು ಹೇಳುತ್ತಿಲ್ಲ. ಹಣೆಬರಹದಾಗ ಇದ್ದಂಗ ಆಗ್ತಾದ. ಮಾಧ್ಯಮಗಳು ಸೇರಿ ಯಾರಿಂದಲೂ ಇದನ್ನು ತಪ್ಪಿಸಲಾಗದು ಎಂದಿದ್ದಾರೆ.
ಯಡಿಯೂರಪ್ಪ ನಾಯಕತ್ವವನ್ನು ಈ ಹಿಂದೆ ಟೀಕಿಸಿರುವುದು ಮುಗಿದ ಘಟನೆ. ಆಗಿನ ಸಂದರ್ಭ, ಸನ್ನಿವೇಶ ಹೇಗಿತ್ತು ಎನ್ನುವುದು ರಾಜ್ಯದ ಜನರಿಗೆ ಗೊತ್ತಿಲ್ಲ. ರಾಜಕೀಯದಲ್ಲಿ ಶತ್ರು-ಮಿತ್ರತ್ವ ಎನ್ನುವುದು ಶಾಶ್ವತವೇನಲ್ಲ. ಬಳ್ಳಾರಿ ಜಿಲ್ಲೆ ಸಚಿವ ತ್ರಯರ ಬಣದಿಂದ ದೂರವಾಗಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿ ಕಪೋಲ ಕಲ್ಪಿತವಾಗಿದ್ದು, ನನ್ನ ನಿಷ್ಠೆ ಅಚಲ. ಬಳ್ಳಾರಿ ಜಿಲ್ಲೆ ಸಚಿವರು ಅದೇ ಪ್ರೀತಿ, ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂದರು.