ಅಪ್ರತಿಮ ದೇಶಭಕ್ತಿ, ನಿಸ್ವಾರ್ಥ ಮನೋಭಾವದಿಂದ ಮಾತ್ರ ಅಖಂಡ ಹಿಂದೂಸ್ತಾನ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಧ್ಯಕ್ಷ ಮೋಹನ್ ಭಾಗವತ್ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಆರ್ಎಸ್ಎಸ್ ಚಿಂತನ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಜಗತ್ತಿನಲ್ಲೇ ಅಪ್ರತಿಮ ದೇಶ. ಇದು ಇಂಥ ಶ್ರೀಮಂತಿಕೆ ಪಡೆಯಲು ಪವಿತ್ರ ಹಿಂದೂ ಸಮಾಜವೇ ಕಾರಣ. ಪರಮ ವೈಭವದ ವಿಶ್ವ ಶಕ್ತಿಯಾಗಿರುವ ದೇಶದ ಬಲಿಷ್ಠತೆಗೆ ಹಿಂದೂಗಳು ಸಂಘಟನೆಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನಾವೆಲ್ಲ ಭಾರತ ಮಾತೆಯ ಪುತ್ರರು. ಆದರೆ, ನಮ್ಮ ದೇಶದ ಬಗ್ಗೆ ವಿಚಾರ ಮಾಡಿದರೆ ಎಲ್ಲೋ ಒಂದು ಕಡೆ ನಾವು ಪ್ರಾಂತೀಯತೆ, ಭಾಷೆಯ ಬಗ್ಗೆ ವಿಚಾರ ಮಾಡುತ್ತೇವೆ. ಇದನ್ನೆಲ್ಲ ಮರೆತು ಭಾರತೀಯತೆಯ ಮನೋಭಾವ ತೋರಬೇಕು. ಪ್ರಾಂಜಲ ಮನಸ್ಸಿನಿಂದ ಹಿಂದೂಸ್ತಾನದ ಕಲ್ಪನೆಗೆ ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು.
ಸಂಘದಲ್ಲಿ ವ್ಯಕ್ತಿಗೆ ಮಹತ್ವವಿಲ್ಲ. ಇಡೀ ಸಮಾಜದ ಒಳಿತಿಗೆ ದುಡಿಯುವ ನಿಸ್ವಾರ್ಥ ಸೈನಿಕರ ಸಂಘಟನೆ ಇದಾಗಿದೆ. ಸಂಘದಲ್ಲಿ ಬೌದ್ದಿಕ ವಿಚಾರ, ಚಿಂತನೆಗೆ ಅವಕಾಶವಿದೆ. ರಾಷ್ಟ್ರದ ಬಗ್ಗೆ ವಿಚಾರ ಮಾಡುವ ವೇದಿಕೆ ಸಂಘದಲ್ಲಿದೆ ಎಂದರು.
ಭಾರತದ ಮೇಲೆ ಸಾವಿರಾರು ವರ್ಷಗಳಿಂದ ಆಕ್ರಮಣ ನಡೆದಿದೆ. ಪಾಶ್ಚಿಮಾತ್ಯರಿಂದ ಆರಂಭವಾದ ಆಕ್ರಮಣ ಇಂದಿಗೂ ಮುಂದುವರಿದಿದೆ. ಇಂಥ ಆಕ್ರಮಣ ತಡೆಯುವ ಶಕ್ತಿ ಭಾರತೀಯರಿಗಿದೆ. ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ ಹೀಗೆ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಆದರೆ, ಸಂಘದಲ್ಲಿರುವ ಜೀವಂತ ಶಕ್ತಿ ಇಂಥ ಆಕ್ರಮಣಗಳನ್ನು ಹಿಮ್ಮೆಟ್ಟಿಸಲು ಸಶಕ್ತವಾಗಿದೆ. ಸಂಘದಲ್ಲಿರುವ ಪರಿಶುದ್ಧತೆ, ಪವಿತ್ರ ಮನಸ್ಸು ದೇಶಭಕ್ತಿಗೆ ತನ್ನ ಕೊಡುಗೆ ನೀಡುತ್ತದೆ. ಪ್ರತಿಯೊಬ್ಬರೂ ಸಂಘಕ್ಕಾಗಿ ದುಡಿದರೆ ಇನ್ನಷ್ಟು ಶಕ್ತಿ ಬರುತ್ತದೆ ಎಂದು ಹೇಳಿದರು.