ಅಕ್ರಮ-ಸಕ್ರಮ ಮಸೂದೆ ಜಾರಿ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದರು.
ರಾಜ್ಯಪಾಲರು ಅಕ್ರಮ-ಸಕ್ರಮ ಮಸೂದೆಗೆ ಅಂಗೀಕಾರ ನೀಡಲು ವಿಳಂಬ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರ ಕುತಂತ್ರವೇ ಕಾರಣ. ಬಿಜೆಪಿ ಸರಕಾರದ ಅವಧಿಯಲ್ಲಿ ಈ ಮಸೂದೆ ಜಾರಿಯಾಗಬಾರದೆಂಬುದು ಅವರ ಉದ್ದೇಶ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಈ ಮಸೂದೆ ಜಾರಿಯಾದರೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ. ಇದರ ಕೀರ್ತಿ ಬಿಜೆಪಿ ಸರಕಾರಕ್ಕೆ ಬರುತ್ತದೆ. ಇದರಿಂದಲೇ ಸತತ ಸೋಲು ಕಂಡಿರುವ ಕಾಂಗ್ರೆಸ್ ಹಿಂಬಾಗಿಲ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.
ಇದೊಂದು ಬಡವರ ಪರವಾದ ಯೋಜನೆ. ಇದು ಜಾರಿಯಾದರೆ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಪ್ರಸ್ತುತ ಕಂದಾಯ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ 15 ಲಕ್ಷ ಕುಟುಂಬಗಳು ಇನ್ನಿಲ್ಲದ ಪಾಡು ಪಡುತ್ತಿವೆ. ಅವರಿಗೆ ಒಳ್ಳೆಯದಾಗಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಅಕ್ರಮ-ಸಕ್ರಮ ಮಸೂದೆಯನ್ನು ತಡೆ ಹಿಡಿಯುವುದು ಸರಿಯಲ್ಲವೆಂದು ಅಡ್ವೊಕೇಟ್ ಜನರಲ್ ಅವರೇ ಹೇಳಿದ್ದಾರೆ. ಅದಕ್ಕೆ ತಡೆಯಾಜ್ಞೆ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಯಲಿದೆ ಎಂದರು. ಉಪ ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿಯಲ್ಲ. ಆ ಆಸೆಯೂ ತಮಗಿಲ್ಲ. ಕನಸಿನಲ್ಲೂ ಅದನ್ನು ಕಂಡಿಲ್ಲ. ಇಲ್ಲದಿರೋ ಸುದ್ದಿಯನ್ನು ನಾನು ಕೇಳುತ್ತಿದ್ದೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನೆಂದೂ ಅಧಿಕಾರದ ಹಿಂದೆ ಹೋಗೋಲ್ಲ. ಈ ವಿಷಯವನ್ನು ಇಲ್ಲಿಗೆ ಮುಕ್ತಾಯ ಮಾಡುವುದು ಒಳ್ಳೆಯದು. ನನಗಿನ್ನೂ ವಯಸ್ಸಿದೆ. ಬೆಳೆಯುತ್ತಿದ್ದೇನೆ. ಸಾರಿಗೆ ಸಚಿವನಾಗಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇನೆ ಎಂದರು.