ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಗಣಿಗೆ ಗುತ್ತಿಗೆ ನೀಡಿಲ್ಲ ಎಂದು ಬೊಗಳೆ ಬಿಡುವ ಮುಖ್ಯಮಂತ್ರಿ ಮಹಾನ್ ಸುಳ್ಳುಗಾರ ಎಂದು ಕಾಂಗ್ರೆಸ್ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.
ಕೋಮವಾದಿ ಬಿಜೆಪಿ ಸರಕಾರ ನೂತನ 15 ಗಣಿಗಳಿ ಆರಂಭಕ್ಕೆ ಅನುಮತಿ ನೀಡಿದ್ದು, 9 ಗಣಿ ಕಂಪೆನಿಗಳಿಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ದಾಖಲೆಗಳ ಸಮೇತ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು.
ಒಂದೇ ಒಂದು ಗಣಿಗೆ ಅನುಮತಿ ನೀಡಿದ್ದಲ್ಲಿ ರಾಜೀನಾಮೆ ನೀಡುವೆ ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿಗಳು ಇದೀಗ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರದ ಅವಧಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ದೂರುವ ಮುಖ್ಯಮಂತ್ರಿಗಳು, ತಮ್ಮ ಅಧಿಕಾರದ ಅವಧಿಯಲ್ಲಿ ನೀಡಿದ ಗಣಿಗಾರಿಕೆ ಬಗ್ಗೆ ಯಾಕೆ ಸೊಲ್ಲೆತ್ತುವುದಿಲ್ಲ ಎಂದು ಉಗ್ರಪ್ಪ ತರಾಟೆಗೆ ತೆಗೆದುಕೊಂಡರು.
ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ವಿದೇಶಿ ಕಂಪೆನಿಯ ಮೂಲಕ ಚೀನಾಗೆ ಕಬ್ಬಿಣ ಅದಿರು ಸಾಗಿಸಿ ಫೆರಾ ಕಾಯ್ದೆಯನ್ನು ಉಲ್ಲಂಘಿಸಿರುವ ದಾಖಲೆಗಳನ್ನು ಬಿಡುಗಡೆ ಮಾಡಿದ ಉಗ್ರಪ್ಪ, ದೇಶದ ತೆರಿಗೆಯನ್ನು ವಂಚಿಸಿದ ಜನಾರ್ಧನ ರೆಡ್ಡಿಯವರ ಶಾಸಕ ಸ್ಥಾನವನ್ನು ಕೂಡಾ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಗಣಿಗಾರಿಕೆಗೆ ಗುತ್ತಿಗೆ ಹಾಗೂ ಲೀಸ್ ಕೂಡಾ ನೀಡಿಲ್ಲ ಎಂದು ಅದ್ಭುತವಾಗಿ ನಟಿಸುತ್ತಿರುವ ಮಹಾನ್ ನಟ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಉಗ್ರಪ್ಪ ವ್ಯಂಗವಾಡಿದರು.
ರಾಜ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು ಎನ್ನುವುದು ಕಾಂಗ್ರೆಸ್ ಪಕ್ಷದ ಒತ್ತಾಯವಲ್ಲ. ಆದರೆ ಗಣಿಗಾರಿಕೆಗೆ ನೂತನವಾಗಿ ಅನುಮತಿ ನೀಡಿಲ್ಲ ಎಂದು ಜನರನ್ನು ವಂಚಿಸುವುದು ಘೋರ ಅಪರಾದ ಎಂದು ಕಾಂಗ್ರೆಸ್ ಪಕ್ಷದ ನಾಯಕ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.