ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ (ಸ್ಯಾಚುರೇಟೆಡ್ ಫ್ಯಾಟ್) ಎಂದು ಹೇಳಿ ತೆಂಗಿನ ಎಣ್ಣೆಯನ್ನು ಬಳಸಲು ಜನರು ಭಯಪಡುವಂತಹ ಸನ್ನಿವೇಶವನ್ನು ಬಹುರಾಷ್ಟ್ರೀಯ ಕಂಪನಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿವೆ. ಆ ನಿಟ್ಟಿನಲ್ಲಿ ವಿಶ್ವ ತೆಂಗು ದಿನಾಚರಣೆಯ ದಿನದ (ಸೆ.2) ಅಂಗವಾಗಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ತುರುವೆಕೆರೆಯಿಂದ ತುಮಕೂರಿನವರಿಗೆ ಸೈಕಲ್ ಜಾಥಾ ಹಮ್ಮಿಕೊಂಡಿರುವುದಾಗಿ ಜಾಥಾದ ಸಂಚಾಲಕ ಅಣೇಕಟ್ಟೆ ವಿಶ್ವನಾಥ್ ತಿಳಿಸಿದ್ದಾರೆ.
ಜಾಥಾದ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆ ಎಂದು ಸಾರುವುದೇ ಪ್ರಮುಖ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಹೃದಯದ ಆರೋಗ್ಯಕ್ಕೆ ತೆಂಗು ಬಳಸಿ ಎಂಬ ಘೋಷ ವಾಕ್ಯದೊಂದಿಗೆ ಜಾಥಾ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಅಲ್ಲದೇ ಗುರುವಾರ ಸಂಜೆ ತೆಂಗು ಬೆಳೆಗಾರರ ಬೃಹತ್ ಸಭೆ ನಡೆಯಲಿದ್ದು, ಇದರಲ್ಲಿ ತೆಂಗು ತಜ್ಞರು ತೆಂಗಿನ ಬಳಕೆ, ಆರೋಗ್ಯದ ಕುರಿತು ಮಾತನಾಡಲಿದ್ದಾರೆ. ತೆಂಗಿನೆಣ್ಣೆಯು ದೇಹದಲ್ಲಿ ರೋಗತರುವ ಬ್ಯಾಕ್ಟೀರಿಯಾ ಹಾಗು ವೈರಸ್‌ಗಳ ವಿರುದ್ದ ಕೆಲಸ ಮಾಡುತ್ತದೆ. ಇದರಿಂದ ಮಾಮೂಲು ಶೀತ, ನೆಗಡಿ, ಜ್ವರ, ಹೆಪಟೈಟಿಸ್, ಅಮೀಬಿಯಾಸಿಸ್, ಹರ್ಷಿಸ್ ಮತ್ತು ಎಚ್ಐವಿ ಮುಂತಾದ ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು ಕೊಡುತ್ತದೆ.
ಸಕ್ಕರೆ ಕಾಯಿಲೆ, ಹೃದಯ ರೋಗ, ರಕ್ತದೊತ್ತಡ, ಹೆಚ್ಚು ತೂಕ, ಬೊಜ್ಜುದೇಹ ಇವೆಲ್ಲ ರೋಗಿಗಳು ತಿನ್ನಬಹುದಾದ ಏಕೈಕ ಎಣ್ಣೆ ತೆಂಗಿನೆಣ್ಣೆ. ತೆಂಗಿನೆಣ್ಣೆಯಲ್ಲಿರುವ ಲಾರಿಕ್ ಆಸಿಡ್ ಎಂಬುದು ತಾಯಿಯ ಎದೆ ಹಾಲನ್ನು ಬಿಟ್ಟರೆ ಇಷ್ಟು ಪ್ರಮಾಣದಲ್ಲಿ (ಶೇ.50) ಸಿಗುವುದು ತೆಂಗಿನೆಣ್ಣೆಯಲ್ಲಿ ಮಾತ್ರ. ಜಗತ್ತಿನಲ್ಲಿಯೇ ತೆಂಗಿನ ಎಣ್ಣೆಯನ್ನು ಹೇರಳವಾಗಿ ಬಳಸುವ ಶ್ರೀಲಂಕಾದಲ್ಲಿ ಹೃದಯಾಘಾತದ ಪ್ರಮಾಣ ಬಹಳ ಕಡಿಮೆ ಇದೆ ಎಂದು ವಿಶ್ವನಾಥ್ ವಿವರಿಸಿದ್ದಾರೆ.
ತೆಂಗಿನೆಣ್ಣೆ, ಕಾಯಿಯನ್ನು ತುಮಕೂರು ಸೇರಿದಂತೆ ಹಲವೆಡೆ ಜನರು ಹೇರಳವಾಗಿ ಬಳಸುತ್ತಿದ್ದಾರೆ. ಕರಾವಳಿಯ ಜನರಂತೂ ಕೊಬ್ಬರಿಎಣ್ಣೆ ಇಲ್ಲದೆ ಏನನ್ನೂ ಮಾಡುವುದಿಲ್ಲ. ಸಾವಿರಾರು ವರ್ಷಗಳಿಂದ ನಮ್ಮ ಜನ ತೆಂಗನ್ನು ತಿನ್ನುತ್ತಾ ಬದುಕಿದ್ದಾರೆ. ತೆಂಗು ನಮ್ಮ ಜನರ ಆಹಾರ ಸಂಸ್ಕೃತಿಯ ಭಾಗವಾಗಿದೆ. ಆಯುರ್ವೇದವೂ ತೆಂಗಿನೆಣ್ಣೆಯನ್ನು ಸಾಕಷ್ಟು ಕಾಯಿಲೆಗಳಿಗೆ ಔಷಧಿಯಾಗಿ ಬಳಸಲು ಹೇಳುತ್ತದೆ.
ಆದರೆ ಇದರ ಬಗ್ಗೆ ಮಾತನಾಡಬೇಕಾದ ಜವಾಬ್ದಾರಿಯಿರುವ ಬಹುಪಾಲು ವೈದ್ಯರು, ವಿಜ್ಞಾನಿಗಳು, ಇಲಾಖೆಗಳು, ಮಂಡಳಿಗಳು ಬಾಯಿ ಮುಚ್ಚಿ ಕುಳಿತಿದ್ದಾರೆ. ಇದೇ ಕಾರಣದಿಂದ ತೆಂಗಿನ ಉತ್ಪನ್ನಗಳ ಬೆಲೆಯೂ ಕುಸಿದಿದೆ. ಸ್ಥಳೀಯ ಬಳಕೆಯೂ ಕಡಿಮೆಯಾಗಿದೆ. ತೆಂಗು ಬಳಕೆದಾರರೇ ಎದ್ದೇಳಿ, ತೆಂಗಿನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರೋಣ ಎಂದು ಜಾಥಾದ ಸಂಘಟಕರು ತಿಳಿಸಿದ್ದಾರೆ.