ರಾಜ್ಯಪಾಲರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿ: ಕೆ.ಎಸ್.ಈಶ್ವರಪ್ಪ
ದಾವಣಗೆರೆ, ಗುರುವಾರ, 2 ಸೆಪ್ಟೆಂಬರ್ 2010( 11:39 IST )
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕಾಂಗ್ರೆಸ್ ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದಾರೆಂದು ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಅವರಿಗೆ ರಾಜಕೀಯ ಮಾಡಬೇಕಿದ್ದರೆ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಅಧಿಕಾರ ಪಡೆದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ರಾಜ್ಯಪಾಲರು ಕಾಂಗ್ರೆಸ್ ಪಕ್ಷದ ಏಜೆಂಟ್ ತರ ವರ್ತಿಸುತ್ತಿದ್ದಾರೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಬಿಜೆಪಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ತರುವುದಾಗಿ ಭರವಸೆ ನೀಡಿತ್ತು. ಹಾಗಾಗಿ ಕಾಯ್ದೆ ಜಾರಿಗೆ ಮುಂದಾಗಿ ನಿಷೇಧ ವಿಧೇಯಕಕ್ಕೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಕಳುಹಿಸಿಕೊಟ್ಟರೆ, ಅವರು ಅದನ್ನು ರಾಷ್ಟ್ರಪತಿಗೆ ರವಾನಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧಕ ವಿಧೇಯಕ ಜಾರಿಯಾಗುವ ನಿಟ್ಟಿನಲ್ಲಿ ಬಿಜೆಪಿ ಯಾವುದೇ ಹೋರಾಟಕ್ಕೂ ಸಿದ್ದವಿದೆ ಎಂದು ಹೇಳಿದ ಈಶ್ವರಪ್ಪ, ಗೋ ಹತ್ಯೆ ನಿಷೇಧ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕುವಂತೆ ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಗೋ ಹತ್ಯೆ ನಿಷೇಧವನ್ನು ಯಾವುದೇ ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ. ರೈತರ ಮತ್ತು ಜನಹಿತ ಪರಿಗಣಿಸಿ ವಿಧೇಯಕ ಜಾರಿಗೆ ಸರಕಾರ ಮುಂದಾಗಿದೆ. ಈ ಬಗ್ಗೆ ಜನರು ಹೋರಾಟ ಮಾಡುವ ಮೊದಲು ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಹಾಕಲಿ ಎಂದು ಸಲಹೆ ನೀಡಿದರು.