ರಾಜ್ಯದ ಅಭಿವೃದ್ಧಿ ಬಿಜೆಪಿ ಮಾತ್ರ ಮಾಡಿದ್ದಾ?: ಮಲ್ಲಿಕಾರ್ಜುನ ಖರ್ಗೆ
ಗುಲ್ಬರ್ಗ, ಗುರುವಾರ, 2 ಸೆಪ್ಟೆಂಬರ್ 2010( 15:38 IST )
ಸುಳ್ಳು ಭರವಸೆ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರವನ್ನು ಜನರುಕಿತ್ತೊಗೆಯಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳ್ತಾರಲ್ಲ ಈ ಯಡಿಯೂರಪ್ಪ, ಅಲ್ಲಾ ಸ್ವಾಮಿ, ಎರಡೂವರೆ ವರ್ಷದಲ್ಲಿ ಎಲ್ಲವನ್ನೂ ನೀವೆ ಮಾಡಿದ್ರಾ, ಈಗ ರಾಜ್ಯದಲ್ಲಿ, ಗುಲ್ಬರ್ಗ ಜಿಲ್ಲೆಯಲ್ಲಿ ಆದ ಅಭಿವೃದ್ಧಿ ಕೆಲಸ ನೀವೆ ಮಾಡಿದ್ದಾ? ಎಂದು ಜನತೆ ಕೇಳಬೇಕು ಎಂದರು. ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ ಸಿಂಗ್ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಖರ್ಗೆ ಮಾತನಾಡಿದರು.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ, ಈಗ ಬಿಜೆಪಿ ಸರಕಾರ ನಾಲ್ಕೂವರೆ ವರ್ಷ ಆಡಳಿತ ಮಾಡಿದ್ದು, ಜನ ಗುರುತಿಸುವ ಕೆಲಸ ಏನು ಮಾಡಿದ್ದಾರೆ?. ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲ್, ಬಿ.ಡಿ.ಜತ್ತಿ, ಕೆಂಗಲ್ ಹನುಮಂತಯ್ಯ ಆಡಳಿತದಲ್ಲಿ ಏನೂ ಕೆಲಸ ಆಗಲೇ ಇಲ್ವಾ? ಎಲ್ಲವನ್ನೂ ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಯಡಿಯೂರಪ್ಪನವರಿಗೆ ಗುಲ್ಬರ್ಗದಲ್ಲಿ ರಸ್ತೆ, ಚರಂಡಿ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಬಡವರಿಗೆ ಆಶ್ರಯ ಮನೆ ನೀಡಲು ಸಾಧ್ಯವಾಗಿಲ್ಲ. ಕಳೆದ ಬಾರಿ ಅತಿವೃಷ್ಟಿಯಾಗಿ ಮನೆ ಕಳೆದುಕೊಂಡವರಿಗೆ ಮನೆ ನೀಡಲು ಸಾಧ್ಯವಾಗಿಲ್ಲ. ಬಿಜೆಪಿ ಸರಕಾರದ ವೈಫಲ್ಯದ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಬೇಕು. ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ನಮೋಶಿ ಸಾಕಷ್ಟು ಕೆಲಸ ಮಾಡಬಹುದಿತ್ತು. ಆದರೆ ಮೂರು ಹುದ್ದೆಗಳನ್ನು ಹೊಂದಿಯೂ ದುರಾಸೆಯಿಂದ ಗುಲ್ಬರ್ಗ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಬಂದಿದ್ದಾರೆ. ಜನ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.