ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಉರುಳಿ ಬಿದ್ದ ಪರಿಣಾಮವಾಗಿ ಒಂದೇ ಕುಟುಂಬದ ಐದು ಜನರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್ಲು ಸಮೀಪ ಗುರುವಾರ ನಡೆದಿದೆ.
ಬಳ್ಳಾರಿಯ ಮಲ್ಲಿಕಾರ್ಜುನ ಎಂಬವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶಿರಡಿಗೆ ತೆರಳಿ ಸಾಯಿಬಾಬಾನ ದರ್ಶನ ಮಾಡಿಕೊಂಡು ವಾಪಸಾಗುತ್ತಿದ್ದ ವೇಳೆ ತೋರಣಗಲ್ಲು ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ತುಂಗಭದ್ರಾ ಬಲದಂಡೆಯ ಕಾಲುವೆಗೆ ಬಿದ್ದು ಈ ದುರಂತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ನಾಗರಾಜ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಎನ್ನುವವರು ಹೊಸ ಕಾರನ್ನು ಖರೀದಿಸಿದ್ದರು. ಶಿರಡಿಯಲ್ಲಿ ಪೂಜೆ ಮಾಡಿಸಿಕೊಂಡು ಇನ್ನೇನು ಮನೆಗೆ ತಲುಪಬೇಕು ಎನ್ನುವಷ್ಟರಲ್ಲಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ ವಾಹನದಲ್ಲಿದ್ದ ಮಲ್ಲಿಕಾರ್ಜುನ್ ಅವರು ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ನಾಗರಾಜ್ ವಿವರಿಸಿದ್ದಾರೆ. ವಾಹನದಲ್ಲಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿ ನೀರು ಪಾಲಾಗಿದ್ದಾರೆ. ಈ ಸಂದರ್ಭದಲ್ಲಿ ಕಾರಿನ ಚಾಲಕ ಕೃಷ್ಣಪ್ಪ ಕೂಡ ಅಪಾಯದಿಂದ ಪಾರಾಗಿ ತಲೆತಪ್ಪಿಸಿಕೊಂಡಿರುವುದಾಗಿ ನಾಗರಾಜ್ ವಿವರಿಸಿದ್ದಾರೆ.
ಮಧುಬಾಲಾ (21), ಹಂಪಮ್ಮ (50), ಪುಷ್ಪಾವತಿ (27) ಸೇರಿದಂತೆ ತ್ರಿಭುವನ್ (4), 9 ತಿಂಗಳ ವರುಣ್ ಎಂಬ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ, ಈಜುಗಾರರು ಐದು ಶವಗಳನ್ನು ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ದುರಂತದಲ್ಲಿ ಕಾರಿನ ಚಾಲಕ ಕೃಷ್ಣಪ್ಪ ಸಾವನ್ನಪ್ಪಿದ್ದಾನೆ ಎಂದು ಭಾವಿಸಲಾಗಿತ್ತು. ಆದರೆ ಆತ ನೀರಿನಿಂದ ಹೊರಬಂದು ಎಸ್ಕೇಪ್ ಆಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದೀಗ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.