ಬೆಂಗಳೂರು, ಶುಕ್ರವಾರ, 3 ಸೆಪ್ಟೆಂಬರ್ 2010( 11:21 IST )
ಅಮೆರಿಕದ ನ್ಯೂಜೆರ್ಸಿಯಲ್ಲಿ 6ನೆ ಅಕ್ಕ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಮೆರಿಕದಲ್ಲಿರುವ ಕನ್ನಡ ನಿವಾಸಿಗಳು ಪ್ರತಿವರ್ಷ ನಡೆಸುವ ಅಕ್ಕ ಸಮ್ಮೇಳನ ಶುಕ್ರವಾರ ರಾತ್ರಿ ಭಾರತೀಯ ಕಾಲಮಾನ 9 ಗಂಟೆಗೆ ವಿಧ್ಯುಕ್ತವಾಗಿ ಉದ್ಘಾಟನೆಯಾಗಲಿದೆ.
ಸಮ್ಮೇಳನ ನಡೆಯಲಿರುವ ನ್ಯೂಜೆರ್ಸಿಯ ಸಭಾಂಗಣ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಏಳು ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರ ಗತ ವೈಭವ, ನಾಡಿನ ಇತಿಹಾಸ, ಸಂಸ್ಕೃತಿ, ಪ್ರವಾಸೋದ್ಯಮ ತಾಣಗಳ ಚಿತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ.
ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ರಾಜ್ಯದಿಂದ ಮೂವರು ಸಚಿವರು ಹಾಗೂ 32 ಶಾಸಕರು ಸ್ವಂತ ಖರ್ಚಿನಲ್ಲಿ ಅಮೆರಿಕಕ್ಕೆ ತೆರಳಿದ್ದಾರೆ.
ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಶಿವನಗೌಡ ನಾಯಕ್ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದು, ಇವರೊಂದಿಗೆ 32 ಮಂದಿ ಶಾಸಕರು ಸೇರಿದ್ದಾರೆ. ಅಲ್ಲದೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಜರಾಮೇ ಅರಸ್, ನಿರ್ದೇಶಕ ಮನು ಬಳಿಗಾರ್ ಸೇರಿದಂತೆ ಒಟ್ಟು 40 ಸದಸ್ಯರ ತಂಡ ಅಮೆರಿಕಕ್ಕೆ ತೆರಳಿದೆ. ಆದರೆ ಸಚಿವ ರೇಣುಕಾಚಾರ್ಯ ಅವರಿಗೆ ವೀಸಾ ಕೈಸೇರುವುದು ವಿಳಂಬವಾದ ನಿಟ್ಟಿನಲ್ಲಿ ಪ್ರಯಾಣ ಮುಂದೂಡಿದ್ದಾರೆ. ಅವರು ಶುಕ್ರವಾರ ಸಂಜೆ ಅಮೆರಕಕ್ಕೆ ತೆರಳುವ ನಿರೀಕ್ಷೆ ಇದೆ.
ಹರಿಕಥೆ, ಸುಗಮ ಸಂಗೀತ ಮತ್ತಿತರ 38 ಸದಸ್ಯರ ನಿಯೋಗವು ನ್ಯೂಜೆರ್ಸಿಗೆ ತೆರಳಿದೆ. ನಟ ಪುನೀತ್ ಕುಮಾರ್, ನಟಿ ರಮ್ಯಾ ಕೂಡ ಪಾಲ್ಗೊಂಡಿದ್ದಾರೆ. ಆದರೆ ಕೆಲವು ಸಚಿವರು ಮತ್ತು ಶಾಸಕರು ಅಮೆರಿಕಕ್ಕೆ ತೆರಳಲು ಉತ್ಸುಕರಾಗಿದ್ದರು ಕೂಡ ಕೊನೆ ಕ್ಷಣದಲ್ಲಿ ವೀಸಾ ಸಿಗದೆ ತಮ್ಮ ಪ್ರಯಾಣ ರದ್ದುಗೊಳಿಸಿದ್ದಾರೆ.