ಬೆಂಗಳೂರು, ಶುಕ್ರವಾರ, 3 ಸೆಪ್ಟೆಂಬರ್ 2010( 13:38 IST )
ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಕೇಂದ್ರ ಮತ್ತು ರಾಜ್ಯದ ಹಲವು ಸಚಿವರೇ ಭಾಗಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರ ಬಂಡವಾಳ ಬಯಲು ಮಾಡದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಪೂರ್ಣಪ್ರಮಾಣದಲ್ಲಿ ತನಿಖೆ ನಡೆಸಲಾಗುವುದು. ಇದರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಸಚಿವರ ಮುಖವಾಡ ಬಯಲುಗೊಳಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಮುಖಂಡರು ಮಾಡಿದ ತಪ್ಪನ್ನು ನನ್ನ ಮೇಲೆ ಹೊರಿಸುತ್ತಿದ್ದಾರೆ. ಅವರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆದರೆ ನಾನು ಕಾಂಗ್ರೆಸ್ ಮುಖಂಡರ ಬಂಡವಾಳ ಬಯಲು ಮಾಡುತ್ತೇನೆ ಎಂದರು.
ತನ್ನ ಅಧಿಕಾರಾವಧಿಯಲ್ಲಿ ಗಣಿಗಾರಿಕೆಗೆ ಹೊಸದಾಗಿ ಲೈಸೆನ್ಸ್ ನೀಡಿಲ್ಲ ಎಂದು ಯಡಿಯೂರಪ್ಪ ಹೇಳಿದರು. ಏತನ್ಮಧ್ಯೆ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಯಡಿಯೂರಪ್ಪ ಅವರು ಹದಿನೈದು ಗಣಿ ಕಂಪನಿಗಳಿಗೆ ಅನುಮತಿ ನೀಡಿರುವುದನ್ನು ದಾಖಲೆ ಸಹಿತ ಬಹಿರಂಗಗೊಳಿಸಿದ್ದರು. ಈ ಆರೋಪಕ್ಕೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕಳೆದ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಯಾವುದೇ ಹೊಸ ಗಣಿ ಗುತ್ತಿಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ತನ್ನ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಕೇವಲ ಎರಡು ಗಣಿ ಕಂಪನಿಗಳಿಗೆ ಮಾತ್ರ ಅನುಮತಿ ನೀಡಿದ್ದೇನೆ. ಹಲವು ಕಂಪನಿಗಳಿಗೆ ಕೇಂದ್ರ ಸರಕಾರವೇ ಗಣಿ ಅನುಮತಿ ನೀಡಲು ಶಿಫಾರಸು ಮಾಡಿದೆ. ನನಗೆ ಬೇರೆ ಯಾವುದೇ ದಾರಿ ಇಲ್ಲ, ಕೇಂದ್ರ ಸರಕಾರವೇ 'ಕೈ' ಬೆಚ್ಚಗೆ ಮಾಡಿದವರಿಗೆ ಲೈಸೆನ್ಸ್ ನೀಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.